ನವದೆಹಲಿ : ಪ್ರೀಮಿಯಂ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಮೆರಿಕದ ದಿಗ್ಗಜ ವಾಹನ ತಯಾರಕ ಸಂಸ್ಥೆ ‘ಜೀಪ್‘, ಭಾರತೀಯ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. 2026ರ ಫೆಬ್ರವರಿ ತಿಂಗಳಲ್ಲಿ ಜೀಪ್ ಕಂಪಾಸ್ (Jeep Compass) ಎಸ್‌ಯುವಿ ಖರೀದಿಯ ಮೇಲೆ ಬರೋಬ್ಬರಿ 2.75 ಲಕ್ಷ ರೂ.ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.
ಹುಂಡೈ ಟ್ಯೂಸಾನ್ ಮತ್ತು ಫೋಕ್ಸ್‌ವ್ಯಾಗನ್ ಟಿಗುವಾನ್‌ನಂತಹ ಪ್ರತಿಸ್ಪರ್ಧಿಗಳ ಪೈಪೋಟಿಯನ್ನು ಎದುರಿಸಲು ಮತ್ತು ಹಳೆಯ ಸ್ಟಾಕ್ ಖಾಲಿ ಮಾಡಲು ಕಂಪನಿ ಈ ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ 1.5 ರಿಂದ 1.7 ಲಕ್ಷ ರೂ.ಗಳಷ್ಟಿದ್ದ ರಿಯಾಯಿತಿ ಮೊತ್ತವನ್ನು ಇದೀಗ ಗಣನೀಯವಾಗಿ ಹೆಚ್ಚಿಸಲಾಗಿದೆ. ಇದು ಚಾಲನಾ ಅನುಭವ ಮತ್ತು ವಾಹನದ ಗುಣಮಟ್ಟಕ್ಕೆ (Build Quality) ಆದ್ಯತೆ ನೀಡುವ ಗ್ರಾಹಕರನ್ನು ಸೆಳೆಯುವ ತಂತ್ರವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ರಿಯಾಯಿತಿಯ ಸ್ವರೂಪವೇನು?
ಈ 2.75 ಲಕ್ಷ ರೂ.ಗಳ ರಿಯಾಯಿತಿಯು ನಗದು ಕಡಿತ, ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ಆಫರ್‌ಗಳನ್ನು ಒಳಗೊಂಡಿದೆ. ಪ್ರಮುಖವಾಗಿ 2025ರಲ್ಲಿ ತಯಾರಾದ (MY2025) ಮತ್ತು ಮಾರಾಟವಾಗದೆ ಉಳಿದಿರುವ ಮಾದರಿಗಳ ಮೇಲೆ ಈ ಗರಿಷ್ಠ ಲಾಭ ಸಿಗಲಿದೆ. ಡೀಲರ್‌ಗಳು ಹಳೆಯ ಸ್ಟಾಕ್ ಅನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಉತ್ಸುಕರಾಗಿದ್ದಾರೆ.
ಆರಂಭಿಕ ಮತ್ತು ಮಧ್ಯಮ ಶ್ರೇಣಿಯ ವೆರಿಯೆಂಟ್‌ಗಳ ಮೇಲಿನ ನಗದು ರಿಯಾಯಿತಿಯು, ಜೀಪ್ ಕಂಪಾಸ್‌ನ ಆನ್-ರೋಡ್ ಬೆಲೆಯನ್ನು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್-ಎಂಡ್ ವೆರಿಯೆಂಟ್‌ಗಳ ಬೆಲೆಗೆ ತಂದು ನಿಲ್ಲಿಸಿದೆ. ಇದು ಸಾಮಾನ್ಯ ಎಸ್‌ಯುವಿ ಬಜೆಟ್ ಹೊಂದಿರುವ ಗ್ರಾಹಕರನ್ನು ಪ್ರೀಮಿಯಂ ವಾಹನದತ್ತ ಆಕರ್ಷಿಸಲು ಕಂಪನಿ ಹೂಡಿರುವ ತಂತ್ರವಾಗಿದೆ. ಮಾಡೆಲ್ ಎಸ್ (Model S) ಮತ್ತು ಟ್ರಯಲ್‌ಹಾಕ್ (Trailhawk) ನಂತಹ ಟಾಪ್-ಸ್ಪೆಕ್ ಆವೃತ್ತಿಗಳ ಮೇಲೂ ಉತ್ತಮ ಕೊಡುಗೆಗಳಿವೆಯಾದರೂ, ಇವುಗಳ ಸ್ಟಾಕ್ ಸೀಮಿತವಾಗಿರಬಹುದು.
ಖರೀದಿಗೆ ಇದೇ ಸೂಕ್ತ ಸಮಯವೇ?
ಜೀಪ್ ಕಂಪಾಸ್ ತನ್ನ ಬಲಿಷ್ಠ ಚಾಸಿಸ್, ಅತ್ಯುತ್ತಮ ಸಸ್ಪೆನ್ಷನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್‌ಗೆ ಹೆಸರುವಾಸಿಯಾಗಿದೆ. ಆದರೆ, ಆಧುನಿಕ ತಂತ್ರಜ್ಞಾನ ಮತ್ತು ದೊಡ್ಡ ಪರದೆಗಳನ್ನು ಹೊಂದಿರುವ ಹೊಸ ಪ್ರತಿಸ್ಪರ್ಧಿಗಳ ಎದುರು ಇದರ ಒಳವಿನ್ಯಾಸ (Interior) ಕೊಂಚ ಹಳೆಯದಾಗಿ ಕಾಣುತ್ತಿದೆ. ಮಾರಾಟದಲ್ಲೂ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಈ ರಿಯಾಯಿತಿ ಅನಿವಾರ್ಯವಾಗಿದೆ.
“ಹೆದ್ದಾರಿ ಪ್ರಯಾಣವನ್ನು ಇಷ್ಟಪಡುವ ಮತ್ತು ಟಚ್‌ಸ್ಕ್ರೀನ್‌ಗಳಿಗಿಂತ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಬೆಲೆ ಕೊಡುವ ವಾಹನ ಪ್ರಿಯರಿಗೆ (Enthusiasts) ಇದು ಸುವರ್ಣಾವಕಾಶ. 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಕೆಲವೇ ಕೆಲವು ಎಸ್‌ಯುವಿಗಳಲ್ಲಿ ಇದೂ ಒಂದು. ಆದರೆ, ಖರೀದಿದಾರರು ವಾಹನ ತಯಾರಾದ ತಿಂಗಳನ್ನು ಪರಿಶೀಲಿಸುವುದು ಮತ್ತು ಡೀಲರ್‌ಗಳ ಬಳಿ ಇನ್ನೂ ಹೆಚ್ಚಿನ ಚೌಕಾಶಿ ಮಾಡುವುದು ಒಳಿತು,” ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬರಲಿದೆ ಟಾಟಾ ಎಂಜಿನ್ ಚಾಲಿತ ಪೆಟ್ರೋಲ್ ಆವೃತ್ತಿ!
ಇದರ ಜೊತೆಗೆ ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ, ಜೀಪ್ ಕಂಪಾಸ್ ಮತ್ತು ಅದರ ದೊಡ್ಡ ಆವೃತ್ತಿಯಾದ ಮೆರಿಡಿಯನ್ (Meridian) ಶೀಘ್ರದಲ್ಲೇ ಟಾಟಾ ಮೋಟರ್ಸ್‌ನ ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಹೈಪರಿಯನ್ ಎಂಜಿನ್ ಪಡೆಯಲಿವೆ. ಟಾಟಾ ಹ್ಯಾರಿಯರ್ ಮತ್ತು ಸಫಾರಿಗಳಲ್ಲಿ ಬಳಕೆಯಾಗಲಿರುವ ಇದೇ ಎಂಜಿನ್, ಜೀಪ್ ವಾಹನಗಳಲ್ಲಿ 170 ಪಿಎಸ್ ಶಕ್ತಿ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸುವ ನಿರೀಕ್ಷೆಯಿದೆ. ಇದು ಕೈಗೆಟುಕುವ ದರದಲ್ಲಿ ಜೀಪ್ ಖರೀದಿಸಲು ಬಯಸುವವರಿಗೆ ಹೊಸ ಆಯ್ಕೆಯನ್ನು ನೀಡಲಿದೆ.
ಇದನ್ನೂ ಓದಿ : ಹಿಂದೂ ಧರ್ಮಕ್ಕೆ ಮತಾಂತರವಾಗ್ತಾರಾ ನಿಕ್ ಜೋನಾಸ್? ಪುತ್ರಿಗೂ ಹಿಂದೂ ಸಂಸ್ಕಾರ ಕಲಿಸುತ್ತಿರುವ ಪ್ರಿಯಾಂಕಾ ಚೋಪ್ರಾ ದಂಪತಿ!


















