ಬಳ್ಳಾರಿ : ಸಂಡೂರು ವಿಧಾನಸಭಾ ಭೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜನಾರ್ಧನ್ ರೆಡ್ಡಿ ಅವರ ಸವಾಲಿಗೆ ಜಯದ ಉತ್ತರವನ್ನು ಕಾಂಗ್ರೆಸ್ ನೀಡಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಬಿ.ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಟಾಸ್ಕ್ ಅನ್ನು ಜಯದಿಂದ ಮುಕ್ತಾಯಗೊಳಿಸಿದ್ದಾರೆ. ಈ ಗೆಲುವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷವಾಗಿತ್ತು. ಇನ್ನು ಬಿಜೆಪಿ ಅಭ್ಯರ್ಥಿಯ ಗೆಲುವಿನ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿ ವಹಿಸಿಕೊಂಡಿದ್ದರು. ಜೊತೆಗೆ, ಸಿದ್ದರಾಮಯ್ಯನವರಿಗೆ ಸವಾಲನ್ನೂ ಹಾಕಿದ್ದರು.
ಹೀಗಾಗಿ ಈ ಕ್ಷೇತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡು ಮೂರು ದಿನ ವಾಸ್ತವ್ಯ ಹೂಡಿ ಭರ್ಜರಿ ಪ್ರಚಾರ ನಡೆಸಿದ್ದರು. ಉಪ ಚುನಾವಣೆಯ ಇತರ ಎರಡು ಕ್ಷೇತ್ರಗಳಿಗಿಂತ ಸಂಡೂರು ಕ್ಷೇತ್ರವನ್ನು ಸಿದ್ದರಾಮಯ್ಯ ಸೀರಿಯಸ್ಸಾಗಿ ತೆಗೆದುಕೊಂಡಿದ್ದರು. ಹೀಗಾಗಿ ಈ ಗೆಲುವಿಗೆಪರೋಕ್ಷವಾಗಿ ಸಿದ್ದರಾಮಯ್ಯ ಕಾರಣರಾದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪ ಚುನಾವಣೆಯ ಮುಖ್ಯವಾಗಿತ್ತು. ಅವರ ವಿರುದ್ದದ ಮುಡಾ ಆರೋಪ, ಎಫ್ಐಆರ್ ನಂತರ ಎದುರಾಗುತ್ತಿರುವ ಚುನಾವಣೆ ಇದಾಗಿರುವುದರಿಂದ ಇದು ಪ್ರತಿಷ್ಠೆಯಾಗಿತ್ತು. ಆದರೆ, ಸಂಡೂರು ಅಲ್ಲದೇ, ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಗೆ ಯಾವ ಕಪ್ಪು ಚುಕ್ಕೆಯೂ ಇಲ್ಲ ಎನ್ನುವುದನ್ನು ಸಾಬೀತು ಮಾಡಿಕೊಂಡಿದೆ.