ಮುಂಬಯಿ: 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿಗೆ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿದೆ. ಆದರೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಹಿನ್ನಡೆಯಾಗುವಂತ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ (jasprit bumrah) ಅವರು ಸಂಪೂರ್ಣ ಫಿಟ್ ಇಲ್ಲದ ಕಾರಣ 2 ವಾರಗಳ ಕಾಲ ತಂಡಕ್ಕೆ ಲಭ್ಯರಿಲ್ಲ ಎಂದು ತಿಳಿದುಬಂದಿದೆ. ಬುಮ್ರಾ ಎಪ್ರಿಲ್ ಮೊದಲ ವಾರದಲ್ಲಿ ಮುಂಬೈ ತಂಡ ಕೂಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
‘ಬುಮ್ರಾ ಅವರ ವೈದ್ಯಕೀಯ ವರದಿಗಳು ಸರಿಯಾಗಿವೆ, ಮತ್ತು ಅವರು ಎನ್‌ಸಿಎಯಲ್ಲಿ ಬೌಲಿಂಗ್ ಅನ್ನು ಪುನರಾರಂಭಿಸಿದ್ದಾರೆ. ಆದಾಗ್ಯೂ, ಐಪಿಎಲ್ ಆರಂಭದಲ್ಲಿ ಅವರು ಬೌಲಿಂಗ್ ಮಾಡುವ ಸಾಧ್ಯತೆ ಕಡಿಮೆ.
“ಅವರ ಬೌಲಿಂಗ್ ಸ್ಥಿತಿ ನೋಡುವಾಗ ಎಪ್ರಿಲ್ ಮೊದಲ ವಾರದಲ್ಲಿ ಮುಂಬೈ ಇಂಡಿಯನ್ಸ್ ಸೇರುವ ನಿರೀಕ್ಷೆ ಮಾಡಲಾಗಿದೆ’ ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿರಿವುದಾಗಿ ವರದಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಸಂದರ್ಭದಲ್ಲಿ ಬುಮ್ರಾ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದರು. ಗಾಯದಿಂದಾಗಿ ಬುಮ್ರಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದಲೂ ಹೊರಬಿದ್ದಿದ್ದರು. ಅವರ ಸ್ಥಾನಕ್ಕೆ ಹರ್ಷಿತ್ ರಾಣಾ ಆಯ್ಕೆಯಾಗಿದ್ದರು.
ಮುಂಬೈ ತಂಡ ಮಾ.23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿರುವ ಮುಂಬೈ ಕಳೆದ ಬಾರಿಯ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ತೋರಿತ್ತು. ತಂಡವು ಸತತ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಮುಖಭಂಗ ಅನುಭವಿಸಿತ್ತು. ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ಬಲಿಷ್ಠ ತಂಡವನ್ನು ರಚಿಸಿದ್ದು 6ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಎಂದು ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ ತಂಡ
ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಜ್, ಕರ್ಣ್ ಶರ್ಮ, ದೀಪಕ್ ಚಹರ್ ,ವಿಲ್ ಜಾಕ್ಸ್ , ಮಿಚೆಲ್ ಸ್ಯಾಂಟ್ನರ್ , ರ್ಯಾನ್ ರಿಕೆಲ್ಟನ್ , ಅಶ್ವನಿ ಕುಮಾರ್, ರೀಸ್ ಟಾಪ್ಲೆ, ಕೆಎಲ್ ಶ್ರೀಜಿತ್ , ರಾಜ್ ಅಂಗದ್ ಬಾವ , ಸತ್ಯನಾರಾಯಣ ರಾಜು, ಬೆವನ್ ಜೇಕಬ್ಸ್, ವಿಘ್ನೇಶ್ ಪುಥರ್, ಅರ್ಜುನ್ ತೆಂಡೂಲ್ಕರ್, ಲಿಜಾಡ್ ವಿಲಿಯಮ್ಸ್.