ಕಲಬುರಗಿ: ಇತ್ತೀಚಿಗಷ್ಟೇ ಸಿಇಟಿ ಪರೀಕ್ಷೆ (CET Exam) ಬರೆಯಲು ಬಂದಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ (Brmhan Students) ಜನಿವಾರ (Janivar) ತೆಗೆಸಿರುವ ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ಅಂತಹುದೇ ಘಟನೆ ನಡೆದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ನಡೆದ ನೀಟ್ (NEET) ಪರೀಕ್ಷೆಯಲ್ಲೂ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್ ಪರೀಕ್ಷೆಯ ವೇಳೆ ಈ ಘಟನೆ ನಡೆದಿರುವ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಎಂಬಾತನ ಜನಿವಾರವನ್ನು ಅಧಿಕಾರಿಗಳು ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಶ್ರೀಪಾದ್ ಪಾಟೀಲ್ ಗೆ ಜನಿವಾರ ತೆಗೆಯುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸೂಚನೆಯಂತೆ ಶ್ರೀಪಾದ್ ಪಾಟೀಲ್ ಜನಿವಾರ ತೆಗೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ, ಪರೀಕ್ಷೆ ಬರೆದಿದ್ದಾರೆ. ಈ ಘಟನೆಯನ್ನು ಖಂಡಿಸಿ ಪರೀಕ್ಷಾ ಕೇಂದ್ರದ ಮುಂದೆ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿದೆ. ಅಲ್ಲದೇ, ಜನಿವಾರ ತೆಗೆಸಿದ ಅಧಿಕಾರಿಯ ಅಮಾನತಿಗೆ ಪಟ್ಟು ಹಿಡಿಯಲಾಗಿದೆ.