ಉಡುಪಿ : ಉಡುಪಿ ಪೊಡವಿಗೊಡೆಯನ ಶ್ರೀ ಕ್ಷೇತ್ರದಲ್ಲಿ ಶ್ರೀಕೃಷ್ಣಾಷ್ಟಮಿ ಸಂಭ್ರಮದಿಂದ ಜರುಗಿತು. ದೇಶದಾದ್ಯಂತ ಚಾಂದ್ರಮಾನ ಪದ್ಧತಿಯಂತೆ ಜನ್ಮಾಷ್ಟಮಿ ಅಚರಿಸಿದರೆ ಉಡುಪಿಯಲ್ಲಿ ಸೌರಮಾನ ಪದ್ಧತಿಯಂತೆ ಆಚರಿಸಿರುವುದು ಈ ಬಾರಿಯ ವಿಶೇಷ. ಮುದ್ದು ಕೃಷ್ಣರ ಓಡಾಟ, ಕರಾವಳಿಯ ಪ್ರಸಿದ್ಧ ಹುಲಿ ವೇಷಗಳ ಆರ್ಭಟ, ಶ್ರೀಕೃಷ್ಣಮಠದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥ ಶ್ರೀಪಾದರ ಘನ ನೇತೃತ್ವದಲ್ಲಿ ವೈಭವದಿಂದ ನಡೆಯಿತು.
ಶ್ರೀ ಕೃಷ್ಣಮಠಕ್ಕೆ ಬೆಳಗ್ಗೆಯಿಂದಲೇ ಸಾಗರೋಪಾದಿಯಲ್ಲಿ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಕಡಗೋಲು ಶ್ರೀ ಕೃಷ್ಣ ಪರಮಾತ್ಮನ ದರ್ಶನ ಪಡೆದರು. ರಾತ್ರಿ ನೈವೇದ್ಯ ಸಮರ್ಪಿಸಿ ಮಹಾಪೂಜೆ ನಡೆಸಿದ ಶ್ರೀಪಾದರು ಚಂದ್ರೋದಯದ ವೇಳೆ 12.11 ಗಂಟೆಗೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಅರ್ಥ್ಯ ಬಿಡುವ ಅವಕಾಶ ಕಲ್ಪಿಸಲಾಯಿತು.
ಪರ್ಯಾಯ ಶ್ರೀಪಾದರು ಏಕಾದಶಿಯಂತೆ ನಿರ್ಜಲ ಉಪವಾಸದಲ್ಲಿದ್ದು, ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ, ತುಳಸಿ ಅರ್ಚನೆ ನಡೆಸಿದರು. ಯತಿದ್ವಯರು ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿ ಮುಹೂರ್ತ ಮಾಡಿದರು. ಮಠದ ದಿವಾನರು ಹಾಗೂ ಅಧಿಕಾರಿಗಳು ಉಂಡೆಗಳನ್ನು ಕಟ್ಟಿದರು. ಲೋಕ ಕಲ್ಯಾಣಕ್ಕಾಗಿ ಉದಯಾಸ್ತಮಾನ ಪರ್ಯಂತ ಸ್ವಾಮಿ ಶ್ರೀ ಕೃಷ್ಣಾಯ ನಮಃ ಮಂತ್ರ ಪಠನೆ ವಿಪ್ರ ಬಳಗ ಸಹಿತ ವಿವಿಧ ಸಂಘಟನೆಗಳು ನೆರವೇರಿಸಿದ್ದು, ಶ್ರೀಪಾದರು ಚಾಲನೆ ನೀಡಿದರು.
ಇನ್ನು, ಶ್ರೀ ಕೃಷ್ಣಮಠವನ್ನು ಫುಲಪುಷ್ಪಗಳಿಂದ ಶೃಂಗರಿಸಲಾಗಿತ್ತು. ಶ್ರೀ ಮಠದ ಹೊರಗೆ ಹಾಗೂ ರಥಬೀದಿಯ ಸುತ್ತ ವಿದ್ದುದ್ದೀಪಾಲಂಕಾರ ಕಂಗೊಳಿಸಿತು. ಚಿಣ್ಣರ ಕೃಷ್ಣ-ರಾಧೆ ವೇಷಗಳ ಸ್ಪರ್ಧೆ ರಾಜಾಂಗಣದಲ್ಲಿ ವೈಭವದಿಂದ. ಶ್ರೀಪಾದರು ಕೃಷ್ಣ ವೇಷಧಾರಿ ಮಕ್ಕಳೊಂದಿಗೆ ಕೆಲಹೊತ್ತು ಕಳೆದರು. ರಥಬೀದಿ, ನಗರದ ಹಲವೆಡೆ ಕೃಷ್ಣವೇಷ, ಪೇಪರ್ ವೇಷ, ರಕ್ಕಸ ವೇಷ, ಹುಲಿವೇಷಧಾರಿಗಳು ಅಲ್ಲಲ್ಲಿ ಸಂಚರಿಸುತ್ತಾ ಕಣ್ಮನ ಸೆಳೆದರು. ಮಹಿಳೆಯರಿಂದ ಮೊಸರು ಕಡೆಯುವ ಸ್ಪರ್ಧೆ, ಪೂಕಳಂ(ಹೂವಿನ ರಂಗೋಲಿ), ರಂಗೋಲಿ ಸ್ಪರ್ಧೆ ನಡೆಯಿತು. ಶ್ರೀಕೃಷ್ಣಮಠದ ಪರಿಸರದಲ್ಲಿ ವೈಭವದ ಲೀಲೋತ್ಸವ ನಡೆಯಲಿದೆ.
ಇನ್ನು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಉಡುಪಿ ವತಿಯಿಂದ ಇತ್ತೀಚಿಗೆ ಗೋಲ್ಡನ್ ಬುಕ್ ಆಫ್ ರೇಕಾರ್ಡ್ಸ್ ಪಟ್ಟಿಗೆ ಸೇರ್ಪಡೆಗೊಂಡ ಯಶವಂತ್ ಬನ್ನಂಜೆ ಇವರ ತಂಡದಿಂದ ಶ್ರೀ ಕೃಷ್ಣ ಸಂಗೀತ ಸುಧೆ,ಸೃಷ್ಟಿ ಕಲಾ ಕುಟೀರ ತಂಡದಿಂದ ಶ್ರೀ ಕೃಷ್ಣ ಲೀಲೋತ್ಸವ ಹಾಗೇ ಯುವಕಮಂಡಲ ನಾಯಕವಾಡಿ ವತಿಯಿಂದ ಜನಪದ ನೃತ್ಯ,ಕಂಸಾಳೆ ಸೇರಿ ಹಲವು ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು. ಮಕ್ಕಳನ್ನು ಮುದ್ದುಕೃಷ್ಣನನ್ನಾಗಿ ತಯಾರಿ ಮಾಡಿದ ಪೋಷಕರು ಕೃಷ್ಣನ ಬಗೆಗಿನ ತಮ್ಮ ಭಕಿಯನ್ನು ಎರಡು ಸಾಲಿನಲ್ಲಿ ತಿಳಿಸಿದರೆ, ಪುಟಾಣೆ ಮಗುವೊಂದು ಕೃಷ್ಣನ ಸಂದೇಶವನ್ನು ನಿರರ್ಗಳವಾಗಿ ಹೇಳಿದ್ದು ಸುಂದರ ಕ್ಷಣಕ್ಕೆ ಸಾಕ್ಷಿಯಾಯಿತು



















