ನವದೆಹಲಿ: ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಕನ್’ ಚಿತ್ರದ ಬಿಡುಗಡೆಗೆ ಸಂಬಂಧಿಸಿದ ಕಾನೂನು ಹೋರಾಟವು ಈಗ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದೆ. ಸಿನಿಮಾಗೆ ‘ಯುಎ’ (UA) ಪ್ರಮಾಣಪತ್ರ ನೀಡುವಂತೆ ಈ ಹಿಂದೆ ನೀಡಿದ್ದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಚಿತ್ರದ ನಿರ್ಮಾಪಕರು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಎಚ್. ವಿನೋತ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಜನ ನಾಯಕನ್’ ಚಿತ್ರವು ಜನವರಿ 9 ರಂದು ತೆರೆಕಾಣಬೇಕಿತ್ತು. ಚಿತ್ರಕ್ಕೆ ‘ಯುಎ’ ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು ಈ ಮೊದಲು ಆದೇಶಿಸಿತ್ತು. ಆದರೆ, ಅದೇ ದಿನ ನಡೆದ ಮತ್ತೊಂದು ವಿಚಾರಣೆಯಲ್ಲಿ ಹೈಕೋರ್ಟ್ ಈ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿತು. ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿಯುವವರೆಗೆ ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ, ಚಿತ್ರದ ಬಿಡುಗಡೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ನಿರ್ಮಾಪಕರಿಂದ ಭಾವನಾತ್ಮಕ ಮನವಿ
ಸೆನ್ಸಾರ್ ವಿವಾದದ ಕುರಿತು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವ ಕೆವಿಎನ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ವೆಂಕಟ್ ಕೆ.ನಾರಾಯಣ, ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿರುವ ವಿಜಯ್ ಅವರಿಗೆ ಇದು ಚಿತ್ರರಂಗದ ಕೊನೆಯ ಚಿತ್ರವಾಗಿದ್ದು, ಅವರಿಗೆ ಗೌರವಯುತ ವಿದಾಯ ನೀಡುವುದು ಅಗತ್ಯವಾಗಿದೆ ಎಂದಿದ್ದಾರೆ. ವಿಜಯ್ ಪೂರ್ಣಪ್ರಮಾಣದ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿರುವ ಹೊತ್ತಲ್ಲೇ ಅವರ ಸಿನಿಮಾ ಬಿಡುಗಡೆಗೆ ಇಷ್ಟೊಂದು ಅಡೆತಡೆಗಳು ಎದುರಾಗುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ದೆಹಲಿಯಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ವಿಜಯ್
ಚಿತ್ರದ ಬಿಡುಗಡೆಗೆ ಕಾನೂನು ಸಂಕಷ್ಟ ಎದುರಾಗಿರುವಂತೆಯೇ, ನಟ ಹಾಗೂ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ ಅವರು ತಮಿಳುನಾಡು ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಇಂದು ದೆಹಲಿಯಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 27 ರಂದು ನಡೆದಿದ್ದ ಭೀಕರ ಘಟನೆಯಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿಜಯ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯವಾಗಿ ಮತ್ತು ವೃತ್ತಿಜೀವನದಲ್ಲಿ ಏಕಕಾಲಕ್ಕೆ ಹಲವು ಸವಾಲುಗಳನ್ನು ವಿಜಯ್ ಎದುರಿಸುವಂತಾಗಿದೆ.
ಜಾಗತಿಕ ಗಮನ ಸೆಳೆದಿರುವ ‘ಜನ ನಾಯಕನ್’
‘ಜನ ನಾಯಕನ್’ ಚಿತ್ರದ ಮೇಲಿನ ತಡೆಯಾಜ್ಞೆ ತೆರವುಗೊಳ್ಳುವುದೇ ಅಥವಾ ಸುಪ್ರೀಂ ಕೋರ್ಟ್ ಸೆನ್ಸಾರ್ ಮಂಡಳಿಗೆ ವಿಶೇಷ ಸೂಚನೆ ನೀಡುವುದೇ ಎಂಬುದು ಈಗ ಕುತೂಹಲ ಮೂಡಿಸಿದೆ. ಜನವರಿ 21 ರವರೆಗೆ ಚಿತ್ರದ ಬಿಡುಗಡೆ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಸುಪ್ರೀಂ ಕೋರ್ಟ್‌ನ ಮುಂದಿನ ನಡೆ ಈ ಚಿತ್ರದ ಭವಿಷ್ಯವನ್ನು ನಿರ್ಧರಿಸಲಿದೆ.
ಇದನ್ನೂ ಓದಿ: ‘ಅಮೂಲ್’ಗೆ ಸೆಡ್ಡು ಹೊಡೆಯಲು ಮುಂದಾದ KMF.. ಈ ಬಾರಿ IPLನಲ್ಲಿ RCB ಜೊತೆ ರಾರಾಜಿಸಲಿದೆ ಕರ್ನಾಟಕದ ಹೆಮ್ಮೆಯ ‘ನಂದಿನಿ’!


















