ಚೆನ್ನೈ : ಟಿವಿಕೆ ಪಕ್ಷದ ನಾಯಕ, ಕಾಲಿವುಡ್ ಸೂಪರ್‌ಸ್ಟಾರ್ ವಿಜಯ್ ಅವರ ಬಹುನಿರೀಕ್ಷಿತ ಚಿತ್ರ ‘ಜನ ನಾಯಕನ್’ ಬಿಡುಗಡೆಗೆ ಎದುರಾಗಿದ್ದ ಕಾನೂನು ಸಮರ ಈಗ ಹೊಸ ತಿರುವು ಪಡೆದುಕೊಂಡಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಗೊಳಿಸಿದೆ. ಇದರಿಂದಾಗಿ ಚಿತ್ರದ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ವಿಜಯ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು ಈ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿಂದೆ ಏಕಸದಸ್ಯ ಪೀಠವು ಸೆನ್ಸಾರ್ ಪ್ರಮಾಣಪತ್ರ ನೀಡಲು ಸೂಚಿಸಿದಾಗ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ತನ್ನ ವಾದ ಮಂಡಿಸಲು ಸೂಕ್ತ ಅವಕಾಶ ನೀಡಿಲ್ಲ ಮತ್ತು ನೈಸರ್ಗಿಕ ನ್ಯಾಯದ ತತ್ವಗಳನ್ನು ಪಾಲಿಸಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸಲು ಸೂಚಿಸಲಾಗಿದ್ದು, ಸೆನ್ಸಾರ್ ಮಂಡಳಿಯು ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿಜಯ್ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸುತ್ತಿರುವ ಕೊನೆಯ ಚಿತ್ರ ಇದಾಗಿರುವುದರಿಂದ, ಈ ವಿವಾದವು ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ್ದ ವಿಜಯ್, “ಯಾವುದೇ ರೀತಿಯ ಒತ್ತಡಗಳಿಗೆ ನಾನು ಮಣಿಯುವುದಿಲ್ಲ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಸೆನ್ಸಾರ್ ಮಂಡಳಿಯ ನಡೆಯನ್ನು ಟೀಕಿಸಿದ್ದರು. ಚಿತ್ರದಲ್ಲಿರುವ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ ಮತ್ತು ಸಶಸ್ತ್ರ ಪಡೆಗಳನ್ನು ತಪ್ಪಾಗಿ ಬಿಂಬಿಸುತ್ತವೆ ಎಂಬ ದೂರಿನ ಮೇರೆಗೆ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರ ನೀಡಲು ಹಿಂದೇಟು ಹಾಕುತ್ತಿದೆ.
ಚಿತ್ರತಂಡದ ಅಸಮಾಧಾನ
ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions), ಸೆನ್ಸಾರ್ ಮಂಡಳಿ ಸೂಚಿಸಿದ ಎಲ್ಲಾ ಬದಲಾವಣೆಗಳನ್ನು ನಾವು ಮಾಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಆದರೂ ಮಂಡಳಿಯು ಪ್ರಮಾಣಪತ್ರ ನೀಡದೆ ಉದ್ದೇಶಪೂರ್ವಕವಾಗಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಿದೆ ಎಂದು ವಾದಿಸಿದೆ. ಚಿತ್ರವು ಜನವರಿ 9 ರಂದೇ ಬಿಡುಗಡೆಯಾಗಬೇಕಿತ್ತು, ಆದರೆ ಈಗಿನ ಕಾನೂನು ತೊಡಕುಗಳಿಂದಾಗಿ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆಯಿದೆ.
ಚುನಾವಣಾ ಕಣದಲ್ಲಿ ‘ಜನ ನಾಯಕನ್’ ಪ್ರಭಾವ
ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಲ್ಲೇ ಈ ಚಿತ್ರದ ವಿವಾದ ತಾರಕಕ್ಕೇರಿರುವುದು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ರಾಜಕೀಯ ಪ್ರೇರಿತ ಸಂಭಾಷಣೆಗಳು ಮತ್ತು ಸಂದೇಶಗಳಿರಬಹುದು ಎಂಬ ಕಾರಣಕ್ಕೆ ಚಿತ್ರಕ್ಕೆ ತಡೆ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೈಕೋರ್ಟ್‌ನ ಈ ಹೊಸ ಆದೇಶದಿಂದಾಗಿ ಚಿತ್ರತಂಡವು ಈಗ ಮತ್ತೊಮ್ಮೆ ಏಕಸದಸ್ಯ ಪೀಠದ ಮುಂದೆ ತನ್ನ ಅರ್ಜಿಯನ್ನು ತಿದ್ದುಪಡಿ ಮಾಡಿ ಸಲ್ಲಿಸಬೇಕಿದೆ.
ಇದನ್ನೂ ಓದಿ : ಸಾಲು ಸಾಲು ರಜೆ ಮುಗಿಸಿ ಮರಳಿದ ಜನ | ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್.. ಹೈರಾಣಾದ ವಾಹನ ಸವಾರರು



















