ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu and Kashmir) ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದು, ಮೂರು ಹಂತಗಳಲ್ಲಿ ಚುನಾವಣೆ ಆರಂಭವಾಗಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಗೆಲುವಿಗಾಗಿ ತಂತ್ರ-ಪ್ರತಿ ತಂತ್ರದ ಮೊರೆ ಹೋಗಿವೆ.
ಸೆಪ್ಟೆಂಬರ್ 18 ರಿಂದ ಮೂರು ಹಂತಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ. 90 ವಿಧಾನಸಭಾ ಕ್ಷೇತ್ರಗಳಲ್ಲಿ (Assembly Election)ತಮ್ಮ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ಮಾಹಿತಿ ನೀಡಿದ್ದಾರೆ.
ಶ್ರೀನಗರದಲ್ಲಿ ಕಾಂಗ್ರೆಸ್ ನಾಯಕತ್ವದೊಂದಿಗಿನ ಮಾತುಕತೆಯ ನಂತರ ಮೈತ್ರಿ ಬಗ್ಗೆ ಘೋಷಿಸಿದ ಅವರು, ನ್ಯಾಷನಲ್ ಕಾಂಗ್ರೆಸ್-ಕಾಂಗ್ರೆಸ್ ಮೈತ್ರಿಯು ದೇಶದಲ್ಲಿ ವಿಭಜಕ ಶಕ್ತಿಗಳನ್ನು ಸೋಲಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಗುರುವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಫಾರೂಕ್ ಮತ್ತು ಎನ್ ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ಅವರ ಗುಪ್ಕರ್ ರಸ್ತೆಯ ನಿವಾಸದಲ್ಲಿ ಭೇಟಿ ಮಾಡಿ, ಮೈತ್ರಿಯ ಕುರಿತು ಚರ್ಚೆ ನಡೆಸಿದ್ದರು.
ಸದ್ಯದ ಮಾಹಿತಿಯಂತೆ, ಸೀಟು ಹಂಚಿಕೆಯ ಬಗ್ಗೆ ಮೂರು ಸುತ್ತಿನ ಚರ್ಚೆಗಳನ್ನು ಈಗಾಗಲೇ ಎರಡೂ ಪಕ್ಷಗಳು ನಡೆಸಿವೆ. ಇಂಡಿಯಾ ಬ್ಲಾಕ್ ನ ಭಾಗವಾಗಿ ಎರಡು ಪಕ್ಷಗಳು ಒಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಕಾಶ್ಮೀರ ಕಣಿವೆಯಲ್ಲಿ ಸ್ಪರ್ಧಿಸಿದ ಮೂರು ಸೀಟುಗಳಲ್ಲಿ ಎನ್ ಸಿ ಒಂದನ್ನು ಕಳೆದುಕೊಂಡರೆ, ಜಮ್ಮುವಿನ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಹೊರ ಬೀಳಲಿದೆ.