ಕ್ಯಾನ್ಬೆರಾ: ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚು ಮಕ್ಕಳ ಜೀವ ಉಳಿಸಿದ ಆಸ್ಟ್ರೇಲಿಯಾದ ರಕ್ತದಾನಿ ಮತ್ತು ಪ್ಲಾಸ್ಮಾದಾನಿ ಜೇಮ್ಸ್ ಹ್ಯಾರಿಸನ್(James Harrison) ಇಹಲೋಕ ತ್ಯಜಿಸಿದ್ದಾರೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನರ್ಸಿಂಗ್ ಹೋಂನಲ್ಲಿ ಅವರು ನಿಧನರಾಗಿದ್ದಾರೆ. ತಮ್ಮ ದೇಹದಲ್ಲಿನ ಅಪರೂಪದ ಪ್ಲಾಸ್ಮಾವನ್ನು ಸಾವಿರಾರು ಬಾರಿ ದಾನ ಮಾಡುವ ಮೂಲಕ ಅವರು “ಮ್ಯಾನ್ ವಿತ್ ದಿ ಗೋಲ್ಡನ್ ಆರ್ಮ್” ಎಂದೇ ಪ್ರಸಿದ್ಧರಾಗಿದ್ದರು.
ತಮ್ಮ ಜೀವಿತಾವಧಿಯಲ್ಲಿ ಅವರು 24 ದಶಲಕ್ಷಕ್ಕೂ ಹೆಚ್ಚು ಶಿಶುಗಳ ಜೀವವನ್ನು ಉಳಿಸಿದ್ದಾರೆ. ಅವರ ಸಾವಿನ ಬಳಿಕ ಅವರು ರಕ್ತದಾನ ಮಾಡಿದ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿವೆ.
ಜೇಮ್ಸ್ ಹ್ಯಾರಿಸನ್ ಕೇವಲ 18 ವರ್ಷ ವಯಸ್ಸಿನವರಿದ್ದಾಗಲೇ ರಕ್ತದಾನ ಅಭಿಯಾನ ಆರಂಭಿಸಿದ್ದರು. ದೇಶದಲ್ಲಿ ರಕ್ತದಾನ ಮಾಡಲು ಗರಿಷ್ಠ ವಯಸ್ಸಿನ ಮಿತಿಯಾದ 81 ವರ್ಷಗಳನ್ನು ತಲುಪುವವರೆಗೂ ತನ್ನ ಈ ಪರೋಪಕಾರಿ ಕಾರ್ಯವನ್ನು ಮುಂದುವರಿಸಿದ್ದಾರೆ. ಅವರು ಒಟ್ಟು 1,111ಕ್ಕೂ ಹೆಚ್ಚು ಬಾರಿ (1173) ರಕ್ತದಾನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅವರ ರಕ್ತದಲ್ಲಿ ಆಂಟಿ-ಡಿ ಎಂಬ ಅಪರೂಪದ ಪ್ರತಿಕಾಯವಿತ್ತು. ಇದು ಭ್ರೂಣ ಮತ್ತು ನವಜಾತ ಶಿಶುವಿನ ಹಿಮೋಲಿಟಿಕ್ ಕಾಯಿಲೆಯನ್ನು (ಎಚ್‍ಡಿಎಫ್ಎನ್) ತಡೆಗಟ್ಟುವಲ್ಲಿ ಅತಿ ಅವಶ್ಯಕ ಎಂದು ಪರಿಗಣಿಸಲಾಗಿದೆ. ಇದು ಗರ್ಭಿಣಿ ಮತ್ತು ಶಿಶುವಿನ ನಡುವೆ ರಕ್ತದ ಪ್ರಕಾರಗಳು ಹೊಂದಿಕೆಯಾಗದಿದ್ದಾಗ ಉಂಟಾಗುವ ಗಂಭೀರ ಕಾಯಿಲೆಯಾಗಿದೆ.
ಇಂಥ ಕಾಯಿಲೆ ಅವರ ರಕ್ತದಲ್ಲಿರುವ ಈ ಅಪರೂಪದ ಅಂಶವು ಅವರನ್ನು ಬಹಳ ಉಪಯುಕ್ತ ದಾನಿಯನ್ನಾಗಿ ಮಾಡಿದೆ. ಹಾಗಾಗಿ ಅವರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಲಕ್ಷಾಂತರ ಶಿಶುಗಳ ಜೀವಗಳನ್ನು ಉಳಿಸಿದ್ದಾರೆ. ಹ್ಯಾರಿಸನ್ 18 ರಿಂದ 81 ವರ್ಷದೊಳಗೆ 1,111 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರಂತೆ.
ಇದನ್ನೂ ಓದಿ: Gold Scam: 90 ದಿನಗಳಲ್ಲಿ 25 ಕೋಟಿ ರೂ. ಪಾವತಿಸಿ ಅಥವಾ ಜೈಲಿಗೆ ಹೋಗಿ: ಚಿನ್ನದ ಹಗರಣದ ಆರೋಪಿಗೆ ಸುಪ್ರೀಂ ಕೋರ್ಟ್
ಹ್ಯಾರಿಸನ್ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಲೈಫ್ ಬ್ಲಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀಫನ್ ಕಾರ್ನೆಲಿಸ್ಸೆನ್, “ಜೇಮ್ಸ್ ತಮ್ಮ ದೇಹದ ಅಮೂಲ್ಯ ರಕ್ತ ಮತ್ತು ಪ್ಲಾಸ್ಮಾವನ್ನು ದಾನ ಮಾಡುವ ಮೂಲಕ ಹಲವರ ಬಾಳಿಗೆ ಆಸರೆಯಾಗಿದ್ದಾರೆ. ಅವರು 1173 ಬಾರಿ ರಕ್ತದಾನ ಮಾಡಿದ್ದರೂ ಅದಕ್ಕೆ ಪ್ರತಿಯಾಗಿ ಅವರು ಏನನ್ನೂ ನಿರೀಕ್ಷಿಸಲಿಲ್ಲ. ಅವರೊಬ್ಬ ಕರುಣಾಮಯಿ ಮತ್ತು ಉದಾರ ವ್ಯಕ್ತಿ. ಇದು ಯಾರೂ ಮುರಿಯಲಾಗದ ದಾಖಲೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ, ಹ್ಯಾರಿಸನ್ ಅವರನ್ನು ಹೀರೋ ಎಂದು ಪರಿಗಣಿಸಲಾಗುತ್ತದೆ. ದೇಶದ ಅತ್ಯುನ್ನತ ಪದಕಗಳಲ್ಲಿ ಒಂದಾದ ‘ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ’ ಸೇರಿದಂತೆ ಅವರು ತಮ್ಮ ಕಾರ್ಯಕ್ಕಾಗಿ ಹಲವು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಪಡೆದಿದ್ದಾರೆ.