ಮುಂಬೈ: ಶಾಕಿಂಗ್ ಬೆಳವಣಿಗೆಯೊಂದರಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಕ್ರಿಕೆಟರ್ ನ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
ಹೌದು, ಟೀಂ ಇಂಡಿಯಾ ಯುವ ಆಟಗಾರ ಯಶಸ್ವಿ ಜೈಸ್ವಾಲ್ ರ ಆ ಒಂದು ತೀರ್ಮಾನ ನಿಜಕ್ಕೂ ಮುಂಬೈ ರಣಜಿ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನು ಬಟಾಬಯಲಾಗಿಸಿದೆ. 23 ವರ್ಷದ ಪ್ರತಿಭಾನ್ವಿತ ಆಟಗಾರ ಇದೀಗ ಮುಂಬೈ ರಣಜಿ ತಂಡಕ್ಕೆ ಗುಡ್ ಬೈ ಹೇಳಿ ಗೋವಾ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಗೆ ಪತ್ರ ಬರೆದು ಜೈಸ್ವಾಲ್ ಅನುಮತಿ ಕೂಡ ಪಡೆದುಕೊಂಡಿದ್ದಾರೆ. ಮುಂಬರೋ ರಣಜಿ ಋತುವಿನಲ್ಲಿ ಜೈಸ್ವಾಲ್ ಗೋವಾ ಪರ ಅಖಾಡಕ್ಕಿಳಿಯೋದು ನಿಶ್ಚಿತವಾಗಿದೆ. ಉತ್ತರ ಪ್ರದೇಶ ಮೂಲದ ಜೈಸ್ವಾಲ್ ತಮ್ಮ ಕ್ರಿಕೆಟ್ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದು ಮಾತ್ರ ಮುಂಬೈನಲ್ಲಿ, ಆದರೆ, ಇದೀಗ ಏಕಾಏಕಿ ಗೋವಾ ಪರ ಆಡಲು ನಿರ್ಧರಿಸಿರೋದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕೇವಲ 12 ವರ್ಷದವರಿದ್ದಾಗಿನಿಂದಲೂ ಕ್ರಿಕೆಟನ್ನೇ ಆರಾಧಿಸಿರುವ ಜೈಸ್ವಾಲ್ ರ ಈ ತೀರ್ಮಾನ ಮುಂಬೈ ರಣಜಿ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಭಾರತೀಯ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿರುವ ಜೈಸ್ವಾಲ್ ರ ಈ ನಿರ್ಧಾರದ ಹಿಂದೆ ಮುಂಬೈ ರಣಜಿ ತಂಡದ ನಾಯಕ ಅಜಿಂಕ್ಯ ರಹಾನೆಯರ ಏಕಪಕ್ಷೀಯ ನಿರ್ಧಾರಗಳೇ ಕಾರಣ ಅನ್ನೋ ಗುಸುಗುಸು ನಡೆದಿದೆ. ಇನ್ನು ಮುಂಬೈ ತೊರೆದು ಗೋವಾ ತಂಡಕ್ಕೆ ಹೋಗುತ್ತಿರುವ ಜೈಸ್ವಾಲ್ ಗೆ ಈ ಬಾರಿ ಆ ತಂಡದ ನಾಯಕತ್ವವೂ ಲಭಿಸುವ ಸಾಧ್ಯತೆಗಳಿವೆ. 2025ರ ಋತುವಿನಲ್ಲಿ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ಪಂದ್ಯಗಳನ್ನು ಆಡಬೇಕಿದೆ. ಉಳಿದಂತೆ ವಿದೇಶಗಳಲ್ಲೂ ಹಲವು ಟೂರ್ನಿಗಳಲ್ಲೂ ಪಾಲ್ಗೊಳ್ಳಬೇಕಿದೆ.
ಹೀಗಾಗಿ ನಿಜಕ್ಕೂ ತಂಡ ಬದಲಿಸಿರೋ ಜೈಸ್ವಾಲ್ ಗೋವಾ ಪರ ಹೆಚ್ಚು ರಣಜಿ ಪಂದ್ಯಗಳಲ್ಲಿ ಕಾಣಿಸಿಕೊಳ್ಳೋದು ಅನುಮಾನ. ಆದ್ರೆ, ಈ ಹಿಂದೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಯುವ ಬ್ಯಾಟರ್ ಸಿದ್ದೇಶ್ ಲಾಡ್ ಕೂಡಾ ಮುಂಬೈ ರಣಜಿ ತಂಡವನ್ನು ತೊರೆದು ಗೋವಾ ತಂಡಕ್ಕೆ ಸೇರ್ಪಡೆಯಾಗಿದ್ದು ಕೂಡ ಗಮನಾರ್ಹ.