ಜೈಪುರ: ರಾಜಸ್ಥಾನದ ಜೈಪುರದ ಪ್ರತಿಷ್ಠಿತ ನೀರ್ಜಾ ಮೋದಿ ಶಾಲೆಯಲ್ಲಿ 4ನೇ ತರಗತಿಯ ವಿದ್ಯಾರ್ಥಿನಿ ಅಮೈರಾ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಎಸ್‌ಇ (CBSE) ನಡೆಸಿದ ತನಿಖೆಯಲ್ಲಿ ಆಘಾತಕಾರಿ ಸತ್ಯಗಳು ಬಯಲಾಗಿವೆ. ಮೃತ ಬಾಲಕಿ ಸುಮಾರು 18 ತಿಂಗಳಿನಿಂದ ಸಹಪಾಠಿಗಳಿಂದ ನಿರಂತರವಾಗಿ ‘ಕೆಟ್ಟ ಪದ’ಗಳಿಂದ ನಿಂದನೆಗೊಳಗಾಗುತ್ತಿದ್ದಳು ಮತ್ತು ಈ ಬಗ್ಗೆ ಶಿಕ್ಷಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ತನಿಖಾ ವರದಿಯಲ್ಲೇನಿದೆ?
ಸಿಬಿಎಸ್‌ಇ ಸಮಿತಿ ನಡೆಸಿದ ತನಿಖೆಯಲ್ಲಿ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಡೆಯಿಂದ ಆಗಿರುವ ಗಂಭೀರ ಲೋಪದೋಷಗಳು ಪತ್ತೆಯಾಗಿವೆ:
ಶಿಕ್ಷಕರ ನಿರ್ಲಕ್ಷ್ಯ: ಘಟನೆ ನಡೆದ ದಿನ, ಬಾಲಕಿ 45 ನಿಮಿಷಗಳ ಅವಧಿಯಲ್ಲಿ ಸುಮಾರು 5 ಬಾರಿ ತರಗತಿ ಶಿಕ್ಷಕಿ ಪುನೀತಾ ಶರ್ಮಾ ಅವರ ಬಳಿ ಸಹಾಯಕ್ಕಾಗಿ ಅಂಗಲಾಚಿದ್ದಳು. ಆದರೆ ಶಿಕ್ಷಕಿ ಆಕೆಯ ಅಳಲನ್ನು ಆಲಿಸುವ ಬದಲು, ಎಲ್ಲರ ಮುಂದೆ ಗದರಿಸಿ ಕಳುಹಿಸಿದ್ದರು. ಇದು ಬಾಲಕಿಯನ್ನು ತೀವ್ರ ಮಾನಸಿಕ ಆಘಾತಕ್ಕೆ ತಳ್ಳಿತು.
ನಿರಂತರ ಕಿರುಕುಳ: ಕಳೆದ ಒಂದೂವರೆ ವರ್ಷದಿಂದ ಸಹಪಾಠಿಗಳು ಆಕೆಯನ್ನು ಚುಡಾಯಿಸುತ್ತಿದ್ದರು ಮತ್ತು ನಿಂದಿಸುತ್ತಿದ್ದರು. ಈ ಬಗ್ಗೆ ಪೋಷಕರು ಮತ್ತು ಸ್ವತಃ ಬಾಲಕಿ ಹಲವು ಬಾರಿ ದೂರು ನೀಡಿದ್ದರೂ, “ನೀನು ಅಡ್ಜೆಸ್ಟ್ ಆಗಬೇಕು” ಎಂದು ಹೇಳಿ ಬಾಯಿ ಮುಚ್ಚಿಸಲಾಗುತ್ತಿತ್ತು. ಒಮ್ಮೆ ಸಹಪಾಠಿಯೊಬ್ಬ ಆಕೆಗೆ ಅಸಭ್ಯ ಸನ್ನೆ ಮಾಡಿದ್ದಾಗಲೂ ಶಿಕ್ಷಕರು ಮೌನ ವಹಿಸಿದ್ದರು.
ಸುರಕ್ಷತಾ ಲೋಪ: ನೆಲಮಹಡಿಯಲ್ಲಿದ್ದ ತರಗತಿಯ ವಿದ್ಯಾರ್ಥಿನಿ 4ನೇ ಮಹಡಿಗೆ ಹೋಗುವವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ. ಅಲ್ಲದೆ, ಕಟ್ಟಡದ ಮೇಲಿನ ಮಹಡಿಗಳಲ್ಲಿ ಸುರಕ್ಷತಾ ಬಲೆಗಳನ್ನು ಅಳವಡಿಸದಿರುವುದು ದೊಡ್ಡ ಲೋಪವಾಗಿದೆ.
ಸಾಕ್ಷ್ಯ ನಾಶದ ಆರೋಪ
ಬಾಲಕಿ ಕೆಳಗೆ ಬಿದ್ದ ಸ್ಥಳವನ್ನು ವಿಧಿವಿಜ್ಞಾನ ತಪಾಸಣೆಗೂ ಮುನ್ನವೇ ಸ್ವಚ್ಛಗೊಳಿಸುವ ಮೂಲಕ ಶಾಲಾ ಸಿಬ್ಬಂದಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತರಗತಿಯ ಸಿಸಿಟಿವಿ ದೃಶ್ಯಾವಳಿಗಳಿದ್ದರೂ, ಅದರಲ್ಲಿ ಆಡಿಯೋ ಇಲ್ಲದಿರುವುದು ಸಿಬಿಎಸ್‌ಇ ನಿಯಮಗಳ ಉಲ್ಲಂಘನೆಯಾಗಿದೆ.
ಶಾಲಾ ಮಂಡಳಿಗೆ ನೋಟಿಸ್
ಈ “ಗಂಭೀರ ಉಲ್ಲಂಘನೆಗಳ” ಹಿನ್ನೆಲೆಯಲ್ಲಿ ಸಿಬಿಎಸ್‌ಇ ಶಾಲಾ ಮ್ಯಾನೇಜರ್‌ಗೆ ನೋಟಿಸ್ ಜಾರಿ ಮಾಡಿದ್ದು, 30 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ. ಶಾಲೆಯ ನಿರ್ಲಕ್ಷ್ಯವೇ “ಮುಗ್ಧ ಬಾಲಕಿಯ” ಸಾವಿಗೆ ಕಾರಣವಾಯಿತು ಎಂದು ವರದಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಆದಿತ್ಯ ಬಿರ್ಲಾ ಸಂಸ್ಥೆಯಿಂದ ವಿದ್ಯಾರ್ಥಿನಿಯರಿಗೆ 25 ಸಾವಿರ ರೂ. ಸ್ಕಾಲರ್ ಶಿಪ್: ಹೀಗೆ ಅರ್ಜಿ ಸಲ್ಲಿಸಿ



















