ದಾವಣಗೆರೆ: ಜೈಲ್ ಮೇಟ್ ಗಳಿಬ್ಬರು ಜೈಲಿಂದ ಹೊರ ಬಂದು ಸಂಬಂಧಿಕರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದಾವಣಗೆರೆ (Davanagere) ಪೊಲೀಸರ (Police) ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳನ್ನು ಮಂಜಪ್ಪ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ನಗರದ ಎಸ್‍ಎಸ್ ಲೇಔಟ್‍ನಲ್ಲಿ ಇತ್ತೀಚೆಗೆ ವೃದ್ಧೆ ಗಂಗಮ್ಮ ಎನ್ನುವರ ಮೇಲೆ ಹಲ್ಲೆ ನಡೆಸಿ 15 ತೊಲ ಬಂಗಾರ ಹಾಗೂ ನಗದನ್ನು ದೋಚಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ನವೀನ್ ಅತ್ಯಾಚಾರ ಹಾಗೂ ಕೊಲೆ ಕೇಸ್ ಸೇರಿದಂತೆ, ಬರೋಬ್ಬರಿ 51 ಕೇಸ್‍ಗಳಲ್ಲಿ ಬೇಕಾದ ಆರೋಪಿಯಾಗಿದ್ದಾನೆ. ಪಂಚನಾಮೆಗೆ ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಕರೆದೊಯ್ದಿದ್ದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಹಿಂದೆ ಕೂಡ ಆತ ಈ ರೀತಿ ಮಾಡಿದ್ದ ಎನ್ನಲಾಗಿದೆ. ಹಲ್ಲೆಗೊಳಗಾಗಿದ್ದ ಗಂಗಮ್ಮನ ತಂಗಿಯ ಮಗ ಮಂಜಪ್ಪ ಕೂಡ ಕೊಲೆ ಕೇಸ್‍ನಲ್ಲಿ ತುಮಕೂರು ಜೈಲಿನಲ್ಲಿದ್ದ. ಆ ವೇಳೆ ಇಬ್ಬರೂ ಪರಿಚಯವಾಗಿದ್ದಾರೆ. ಆನಂತರ ಇಬ್ಬರೂ ಮಾತನಾಡಿಕೊಂಡು ಗಂಗಮ್ಮನ ಮನೆಯಲ್ಲಿ ದರೋಡೆ ಮಾಡಿ ಈಗ ಸಿಕ್ಕಿಹಾಕಿಕೊಂಡಿದ್ದಾರೆ.