ಮಂಡ್ಯ: ಸರ್ಕಾರಿ ಕಾಲೇಜನ್ನೇ ಜೈಲು ಮಾಡಿ ಶೂಟಿಂಗ್ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಲೇಜಿನ ಸ್ವರೂಪ ಬದಲಾಯಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗಿದೆ. ಕಲ್ಲು ಕಟ್ಟಡ ಎಂದೇ ಕರೆಯಿಸಿಕೊಳ್ಳುವ ಬಾಲಕಿಯರ ಕಾಲೇಜಿಗೆ ನಿತ್ಯವೂ ಸಾವಿರಾರು ಹೆಣ್ಣು ಮಕ್ಕಳು ಬರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಭಟದ ಮಧ್ಯೆಯೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಪಾಲಿಗೆ ವಿದ್ಯಾ ದೇಗಲವಾಗಿದೆ. ಇಂತಹ ಕಾಲೇಜಿನಲ್ಲಿ ಜೈಲ್ ಸೆಟ್ ಹಾಕಿ ಚಿತ್ರೀಕರಣ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಈಗ ಆಕ್ರೋಶ ವ್ಯಕ್ತಪಡಿಸಿ ಪ್ರಶ್ನಿಸುತ್ತಿದ್ದಾರೆ.
‘ಜೆಸಿ’ ಚಿತ್ರತಂಡ ಭರದಿಂದ ಶೂಟಿಂಗ್ ನಲ್ಲಿ ತೊಡಗಿದ್ದು, ಕಾರಾಗೃಹ ಸನ್ನಿವೇಶಗಳನ್ನ ಮಂಡ್ಯದಲ್ಲಿ ಚಿತ್ರೀಕರಣ ಮಾಡುತ್ತಿದೆ. ಶೂಟಿಂಗ್ಗಾಗಿ ಕೆಲವು ಮಾರ್ಪಾಡು ಮಾಡಿ, ಸರ್ಕಾರಿ ಕಾಲೇಜಿಗೆ ಬೆಂಗಳೂರು ಕೇಂದ್ರ ಕಾರಾಗೃಹ ಎಂದು ಫಲಕ ಹಾಕಲಾಗಿದೆ. ಕಾಲೇಜಿನ ಮುಂದೆ ಇದ್ದ ಧ್ವಜಕಂಬ ಕಟ್ ಮಾಡಿ, ಕಟ್ಟಡದ ಕಿಟಕಿ ಬಾಗಿಲು ಬದಲಾವಣೆ ಮಾಡಿದ್ದಾರೆ. ಹೀಗಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಜೆಸಿ’ ಎಂಬ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮೂಲಕ ನಟ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಕಾಲೇಜಿನಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.