ಚಂದನವನದ ಸದ್ಯದ ಸ್ಥಿತಿ ಕಂಡು ಹಿರಿಯ ನಟ ಜಗ್ಗೇಶ್ ಕಣ್ಣೀರು ಸುರಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಬರುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಜಡ್ಜ್ ಆಗಿರುವ ಜಗ್ಗೇಶ್, ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಕುರಿತು ಮಾತನಾಡುತ್ತಾ ಏಕಾಏಕಿ ಭಾವುಕರಾಗಿದ್ದಾರೆ. ಈ ವೇಳೆ ಜಗ್ಗೇಶ್ ಅವರನ್ನು ಶೋನ ಇತರೆ ಜಡ್ಜ್ ಗಳು ಹಾಗೂ ನಿರೂಪಕರು ಸಮಾಧಾನ ಪಡಿಸಿದ್ದಾರೆ. ಜಗ್ಗೇಶ್ ಭಾವುಕರಾಗಿ ಮಾತನಾಡಿರುವ ವಿಡಿಯೋವನ್ನು ಜೀ ಕನ್ನಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದೆ.
ಎಲ್ಲರೂ ಒಳ್ಳೆಯ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಯಾರೂ ಕೆಟ್ಟ ಸಿನಿಮಾ ಮಾಡಬೇಕು ಎಂದುಕೊಂಡು ಚಿತ್ರರಂಗಕ್ಕೆ ಬಂದಿರುವುದಿಲ್ಲ. ಒಳ್ಳೆಯ ಪ್ರಚಾರ ಮಾಡುತ್ತಿದ್ದಾರೆ. ಟಿವಿ, ಪೇಪರ್ ಗಳಲ್ಲಿ ಜಾಹೀರಾತುಗಳನ್ನು ಕೊಡುತ್ತಾರೆ. ಆದರೆ ಸಿನಿಮಾ ಬಿಡುಗಡೆ ಆದಾಗ ಜನರೇ ಇರುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ಯಾಕೇ ಇಂತಹ ಪರಿಸ್ಥಿತಿ ಬಂತು? ಎಂದು ಕಣ್ಣೀರು ಸುರಿಸುತ್ತಿದ್ದಾರೆ.
ಅಕ್ಷಯ್ ಕುಮಾರ್ ಅವರ ನಟನೆಯ ಸಾಲು-ಸಾಲು ಸಿನಿಮಾಗಳು ಸೋತಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅವರಂತೂ ಡಿಸಾಸ್ಟರ್ ಆಗಿಬಿಟ್ಟಿದ್ದಾರೆ. ಇಡೀ ಭಾರತದಲ್ಲಿ ಸಿನಿಮಾ ಎಂಬುದು ಸತ್ತು ಹೋಗುತ್ತಿದೆ. ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡುತ್ತಾರೋ ಅದಷ್ಟೆ ಸಿನಿಮಾ ಎಂಬಂತೆ ಆಗಿಬಿಟ್ಟಿದೆ. ಯಾರು ಒಂದೊಳ್ಳೆ ಕತೆ ಮಾಡಿ, ಸಣ್ಣ ಸಿನಿಮಾ ಮಾಡುತ್ತಾರೋ ಅದು ಸಿನಿಮಾ ಅಲ್ಲ ಎಂಬಂತೆ ಆಗಿಬಿಟ್ಟಿದೆ ಪರಿಸ್ಥಿತಿ. ಹೀಗಾದರೆ ಉಳಿದವರು ಬದುಕುವುದು ಹೇಗೆ? ಎಂದು ಜಗ್ಗೇಶ್ ಪ್ರಶ್ನಿಸಿದ್ದಾರೆ.