ಬೆಂಗಳೂರು: ಕರ್ನಾಟಕದಲ್ಲಿ ಇಡ್ಲಿ ಹಾಗೂ ಕಲ್ಲಂಗಡಿಯಲ್ಲಿ ಹಾನಿಕಾರಕ ಅಂಶಗಳು ಇರುವುದು ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಲ್ಯಾಬ್ ಪರೀಕ್ಷೆಗಳಲ್ಲಿ ದೃಢಪಟ್ಟಿತ್ತು. ಕಲ್ಲಂಗಡಿ ಕೆಂಪಾಗಿ ಕಾಣಲು ಇಂಜೆಕ್ಷನ್ ನೀಡುವುದು ಬಯಲಾಗಿತ್ತು. ಇದರ ಬೆನ್ನಲ್ಲೇ, ಬೆಲ್ಲದಲ್ಲೂ (Jaggery) ಹಾನಿಕಾರಕ ರಾಸಾಯನಿಕ ಇರುವುದು ಆಹಾರ ಇಲಾಖೆ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಏನೆಲ್ಲ ಮಿಶ್ರಣ?
ಬೆಲ್ಲದಲ್ಲಿ ಅಪಾಯಕಾರಿ ರಾಸಾಯನಿಕ ಸಲ್ಫರ್ ಡೈ ಆಕ್ಸೈಡ್ ಹಾಗೂ ಕೃತಕ ಬಣ್ಣ ಮಿಶ್ರಣ ಮಾಡುತ್ತಿರುವುದು ಗೊತ್ತಾಗಿದೆ. ಬೆಲ್ಲ ಗೋಲ್ಡನ್ ಕಲರ್ ನಲ್ಲಿ ಕಾಣಿಸುವ ಮೂಲಕ ಜನರನ್ನು ಸೆಳೆಯುವಂತೆ ಮಾಡಲು ಕೃತಕ ಬಣ್ಣ ಬೆರೆಸಲಾಗುತ್ತಿದೆ ಎಂಬುದು ತಪಾಸಣೆಯಲ್ಲಿ ಬಯಲಾಗಿದೆ. ಗೋಲ್ಡನ್ ಕಲರ್ ನಲ್ಲಿ ಕಾಣಿಸುವ ಬೆಲ್ಲವನ್ನು ಜನ ಇಷ್ಟಪಡುತ್ತಾರೆ. ಆದರೆ ರಾಸಾಯನಿಕ ಮಿಶ್ರಿತ ಬೆಲ್ಲ ಆರೋಗ್ಯದ ಮೇಲೆ ಅಡ್ಡ ಪರಿಣಾಮಕ್ಕೆ ಕಾರಣವಾಗಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಕರ್ನಾಟಕದ ಹಲವು ಕಡೆಗಳಲ್ಲಿ ಆಹಾರ ಇಲಾಖೆ ಬೆಲ್ಲದ ಮಾದರಿಗಳನ್ನು ಸಂಗ್ರಹ ಮಾಡಿತ್ತು. ಆ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ವರದಿ ಪ್ರಕಾರ, ಸ್ಯಾಂಪಲ್ಗಳಲ್ಲಿ ಕಲರ್ ಏಜೆಂಟ್ ಹಾಗೂ ಸಲ್ಫರ್ ಡೈ ಆಕ್ಸೈಡ್ ಮಿಶ್ರಣ ಇರುವುದು ಖಚಿತವಾಗಿದೆ. ಇದನ್ನು ಆಧರಿಸಿ ರಾಜ್ಯ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.
ಇಡ್ಲಿಗೆ ಬಳಸುವ ಪ್ಲಾಸ್ಟಿಕ್ ಹಾಳೆಗಳನ್ನು ಈಗಾಗಲೇ ರಾಜ್ಯ ಸರ್ಕಾರ ನಿಷೇಧಿಸಿದೆ. ರಾಜ್ಯದ ಹಲವೆಡೆ ಮಾರಾಟವಾಗುವ ಕಲ್ಲಂಗಡಿ ಹಣ್ಣುಗಳಿಗೆ ರುಚಿ ಮತ್ತು ಬಣ್ಣ ಬರುವುದಕ್ಕಾಗಿ ರಾಸಾಯನಿಕಯುಕ್ತ ಇಂಜೆಕ್ಷನ್ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಇದರ ವಿರುದ್ಧವೂ ಆಹಾರ ಇಲಾಖೆ ಅಧಿಕಾರಿಗಳು ದಾಳಿಗಳನ್ನು ನಡೆಸುವ ಮೂಲಕ ಕ್ರಮ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಬೆಲ್ಲವೂ ಅಪಾಯಕಾರಿ ಎಂಬ ಸಂಗತಿ ಬಯಲಾದ ಕಾರಣ, ಜನರಿಗೆ ಯಾವುದನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬ ಗೊಂದಲ ಮೂಡಿಸಿದೆ.