ವಿಜಯವಾಡ: ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆಯ ತುಪ್ಪ ಬಳಸಲಾಗಿದೆ ಎಂಬ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಮಾಜಿ ಸಿಎಂ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಹಾಲಿ ಸರ್ಕಾರ ಸುಮ್ಮನೆ ನಮ್ಮ ಮೇಲೆ ಆಪಾದನೆ ಮಾಡುತ್ತಿದೆ. ವೈಫಲ್ಯಗಳನ್ನು ಬಚ್ಚಿಡಲು ಮುಖ್ಯಮಂತ್ರಿಗಳು ಆಡುತ್ತಿರುವ ನಾಟಕ ಇದು. ದೇವರ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಧಾನಿಗೆ ಸಿಎಂ ನಾಯ್ಡು ವಿರುದ್ಧ ಜಗನ್ ಟೀಕಾ ಪ್ರಹಾರ ನಡೆಸಿದ್ದಾರೆ.
ದನಗಳು ಮತ್ತು ಹಂದಿಗಳ ಕೊಬ್ಬಿನ ಕಲಬೆರಕೆಯ ತುಪ್ಪದಿಂದ ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ತಯಾರಿಸಲಾಗಿದೆ ಎಂಬ ಆರೋಪವನ್ನು ನಾಯ್ಡು ಮಾಡಿದ್ದಾರೆ. ಲಡ್ಡು ತಯಾರಿಸಲು ಸಬರಾಜಾಗುವ ತುಪ್ಪದ ಸ್ಯಾಂಪಲ್ ನ ಪರೀಕ್ಷೆಯಲ್ಲಿ ದನ ಮತ್ತು ಹಂದಿಯ ಮಾಂಸದ ಕೊಬ್ಬಿನ ಅಂಶಗಳನ್ನು ಬಳಸಿರುವುದು ದೃಢಪಟ್ಟಿದೆ.
ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದ ಸಂದರ್ಭದಲ್ಲೇ ತಿರುಪತಿ ಲಡ್ಡುವಿನ ಗುಣಮಟ್ಟ ಸರಿ ಇಲ್ಲ ಎಂದು ಚುನಾವಣೆ ಸಂದರ್ಭದಲ್ಲೇ ಆರೋಪಿಸಲಾಗುತ್ತಿತ್ತು. ಈಗ ಚಂದ್ರಬಾಬು ನಾಯ್ಡು ಸಿಎಂ ಆದ ನಂತರ, ಟಿಟಿಡಿಯ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಬೇರೊಂದು ಮಂಡಳಿ ರಚಿಸಿ, ಲಡ್ಡುವಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದರು. ಆಗ ಲಡ್ಡು ತಯಾರಿಕೆಯಲ್ಲಿ ಅಶುದ್ಧ ತುಪ್ಪ ಬಳಸಿರುವುದು ಲ್ಯಾಬ್ ವರದಿಯಿಂದ ತಿಳಿದು ಬಂದಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ವೈ.ಎಸ್.ಆರ್. ಜಗನ್ ಮೋಹನ್ ರೆಡ್ಡಿ ಈ ತುಪ್ಪವನ್ನು ಬಳಸಿಯೇ ಇರಲಿಲ್ಲ ಎಂದು ಹೇಳಿದ್ದಾರೆ. ಹಿಂದಿನಿಂದ ನಡೆಸಿಕೊಂಡು ಬರಲಾದ ವಿಧಾನಗಳನ್ನು ತಮ್ಮ ಆಡಳಿತದಲ್ಲೂ ಮುಂದುವರಿಸಲಾಗಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಒಂದು ಸ್ಯಾಂಪಲ್ ನಲ್ಲಿ ದೋಷ ಕಂಡು ಬಂದರೆ ಇಡೀ ಟ್ಯಾಂಕರ್ ನ್ನು ತಿರಸ್ಕರಿಸಲಾಗುತ್ತಿತ್ತು. ಹಸುಗಳ ಆಹಾರ ಪದ್ಧತಿ ಸೇರಿದಂತೆ ಇನ್ನಿತರ ಅಂಶಗಳು ಗುಣಮಟ್ಟ ಪರೀಕ್ಷೆಯಲ್ಲಿ ಏರುಪೇರು ಉಂಟಾಗುವಂತೆ ಮಾಡಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.