ಭಾರತ ಹಾಗೂ ಬಾಂಗ್ಲಾದೇಶ ಮಧ್ಯೆ ಟೆಸ್ಟ್ ಟೂರ್ನಿ ನಡೆಯುತ್ತಿದ್ದು, ಮೊದಲ ಟೆಸ್ಟ್ ನಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳು ವಿಫಲವಾಗಿದ್ದಾರೆ. ಆದರೆ, ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಉತ್ತಮವಾಗಿ ಆಟವಾಡಿ ಗೌರವ ಕಾಪಾಡಿದ್ದರು. ಹೀಗಾಗಿ ಭಾರತ ಮೇಲುಗೈ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಲ್ಲಿ ಅಶ್ವಿನ್ ಹಾಗೂ ಜಡೇಜಾ 199 ರನ್ ಗಳ ಜೊತೆಯಾಟದ ನೆರವಿನಿಂದಾಗಿ 376 ರನ್ ಗಳಿಸಿರುವ ತಂಡ, ಈಗ ಬಾಂಗ್ಲಾದೇಶ ತಂಡವನ್ನು 149 ರನ್ ಗಳಿಗೆ ಕಟ್ಟಿ ಹಾಕಿದೆ. ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಸ್ಪಿನ್ನರ್ ಜಡೇಜಾ ಉತ್ತಮ ಬೌಲಿಂಗ್ ಮಾಡಿ ಬಾಂಗ್ಲಾ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಮೊದಲು ಬ್ಯಾಟಿಂಗ್ನಲ್ಲಿ 86 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದ್ದ ಜಡೇಜಾ, ಆ ಬಳಿಕ ಪ್ರಮುಖ 2 ವಿಕೆಟ್ ಕಬಳಿಸಿದರು.
ಈ ಮೂಲಕ ರವೀಂದ್ರ ಜಡೇಜಾ ಭಾರತದ ಅದ್ಭುತ ಆಟಗಾರ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ತಮ್ಮ ಮ್ಯಾಜಿಕಲ್ ಸ್ಪಿನ್ ಜೊತೆಗೆ ಬ್ಯಾಟಿಂಗ್ ನಲ್ಲೂ ಕಮಾಲ್ ಮಾಡುತ್ತಲೇ ಇದ್ದಾರೆ. ಜಡೇಜಾ ಏಕಾಂಗಿಯಾಗಿ ಹಲವಾರು ಪಂದ್ಯಗಳ ಗೆಲುವಿಗೆ ಕಾರಣರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಅಶ್ವಿನ್ ಜೊತೆಗೆ 199 ರನ್ ಗಳ ಜೊತೆಯಾಟ ಆಡಿದ್ದಾರೆ. 86 ರನ್ ಬಾರಿಸಿ ಕೇವಲ 14 ರನ್ ಗಳಿಂದ ಶತಕ ವಂಚಿತರಾಗಿದ್ದಾರೆ. ಈ ಮೂಲಕ ಅವರು ವಿಶ್ವಾಸಾರ್ಹ ಬ್ಯಾಟ್ಸ್ ಮನ್ ಎಂಬುವುದನ್ನು ಸಾಬೀತು ಮಾಡಿದ್ದಾರೆ.
ಜಡೇಜಾ ಅವರ ಅಂಕಿ ಅಂಶಗಳು ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರರಂತಹ ಅನುಭವಿ ಬ್ಯಾಟ್ಸ್ ಮನ್ ಗಳಿಗಿಂತಲೂ ಉತ್ತಮವಾಗಿದೆ. 4 ವರ್ಷಗಳಲ್ಲಿ, ಜಡೇಜಾ ಒಬ್ಬ ಬ್ಯಾಟ್ಸ್‌ಮನ್ ಆಗಿ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ.
ಸೆ. 1, 2020 ರಿಂದ ಇಲ್ಲಿಯವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಕೊಹ್ಲಿ 34.70 ರ ಸರಾಸರಿಯಲ್ಲಿ 1631 ರನ್ ಗಳಿಸಿದ್ದಾರೆ. ಪೂಜಾರ 30.11 ರ ಸರಾಸರಿಯಲ್ಲಿ 1355 ರನ್ ಗಳಿಸಿದ್ದರೆ, ಕೆ ಎಲ್ ರಾಹುಲ್ 32.33 ರ ಸರಾಸರಿಯಲ್ಲಿ 873 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ 36.86 ರ ಸರಾಸರಿಯಲ್ಲಿ 811 ರನ್ ಗಳಿಸಿದ್ದರೆ, ರಹಾನೆ 35.44 ರ ಸರಾಸರಿಯಲ್ಲಿ 874 ರನ್ ಗಳಿಸಿದ್ದಾರೆ. ಶುಭ್ಮನ್ ಗಿಲ್ ಕೂಡ 35.44 ರ ಸರಾಸರಿಯಲ್ಲಿ 1524 ರನ್ ಗಳಿಸಿದ್ದಾರೆ. ಆದರೆ, ಈ ಎಲ್ಲ ಶ್ರೇಷ್ಠ ಬ್ಯಾಟ್ಸಮನ್ ಗಳಿಗಿಂತಲೂ ಜಡೇಜಾ ಉತ್ತಮ ಪ್ರದರ್ಶನ ತೋರಿದ್ದು ಕಂಡು ಬಂದಿದೆ. ಜಡೇಜಾ 39.15 ಸರಾಸರಿಯಲ್ಲಿ 1253 ರನ್ ಗಳಿಸಿದ್ದಾರೆ.