ಬಳ್ಳಾರಿ: ಕುಚುಕು ಸ್ನೇಹಿತರಾಗಿದ್ದ ಶ್ರೀರಾಮುಲು ಹಾಗೂ ಜನಾರ್ಧನ್ ರೆಡ್ಡಿ ಮಧ್ಯೆ ವಾರ್ ಶುರುವಾಗಿದೆ. ಹೀಗಾಗಿ ಅವರಿಬ್ಬರು ಬಹಿರಂಗವಾಗಿಯೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ತಮ್ಮ ವಿರುದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮಹೋನ್ ದಾಸ್ ಕೂಡ ಆರೋಪ ಮಾಡಿದ್ದಾರೆಂದು ಶ್ರೀರಾಮುಲು ಪಕ್ಷ ತೊರೆಯುವ ಮಾತುಗಳನ್ನಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಎಂಟ್ರಿ ಕೊಟ್ಟಿದ್ದಾರೆ.
ಶ್ರೀರಾಮುಲುಗೆ ಕರೆ ಮಾಡಿರುವ ನಡ್ಡಾ ಮನವೊಲಿಕೆ ಮುಂದಾಗಿದ್ದಾರೆ. ಸಂಡೂರು ಉಪಚುನಾವಣೆಗೆ ಸಂಬಂಧಿಸಿದಂತೆ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಹಾಗೂ ಶ್ರೀರಾಮುಲು ನಡುವೆ ಮಾತಿನ ಜಟಾಪಟಿ ನಡೆದಿತ್ತು. ಹೀಗಾಗಿ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಜೆಪಿ ನಡ್ಡಾ ಶ್ರೀರಾಮುಲು ಮನವೊಲಿಕೆಗೆ ಮುಂದಾಗಿದ್ದಾರೆ. ಇಂದು (ಜನವರಿ 23) ಜೆಪಿ ನಡ್ಡಾ ಅವರು ಶ್ರೀರಾಮುಲು ಅವರಿಗೆ ದೂರವಾಣಿ ಕರೆ ಮಾಡಿ ದೆಹಲಿಗೆ ಬನ್ನಿ ಕೂತು ಮಾತಾಡೋಣ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಕೋರ್ ಕಮಿಟಿ ಸಭೆಯಲ್ಲಿ ತಮಗಾದ ಅವಮಾನದ ಬಗ್ಗೆ ಜೆಪಿ ನಡ್ಡಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷ ಬಿಡುವ ಬಗ್ಗೆ ಹಾಗೂ ಪಕ್ಷದ ವಿರುದ್ಧ ಏನೂ ಮಾತನಾಡಬೇಡಿ. ದೆಹಲಿಗೆ ಬನ್ನಿ ಕುಳಿತುಕೊಂಡು ಮಾತಾಡೋಣ ಎಂದು ನಡ್ಡಾ ಮನವೊಲಿಸಿದ್ದು, ಇದಕ್ಕೆ ಶ್ರೀರಾಮುಲು ಸಹ ಓಕೆ ಎಂದಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಶ್ರೀರಾಮುಲು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.