ನವದೆಹಲಿ : ಮುಂಬರುವ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವಂತೆಯೇ, ಟೀಮ್ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪ್ರಸ್ತುತ ಭಾರತೀಯ ಬ್ಯಾಟರ್‌ಗಳ ಅಬ್ಬರದ ಫಾರ್ಮ್ ಗಮನಿಸಿದರೆ, ಪಾಕಿಸ್ತಾನ ತಂಡ ವಿಶ್ವಕಪ್ ಆಡಲು ಬಾರದೇ ಇರುವುದು ಉತ್ತಮ, ಒಂದು ವೇಳೆ ಬಂದರೆ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ ಎಂದು ಶ್ರೀಕಾಂತ್ ವ್ಯಂಗ್ಯವಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಪರಾಕ್ರಮವನ್ನು ಕಂಡು ಶ್ರೀಕಾಂತ್ ಈ ಹೇಳಿಕೆ ನೀಡಿದ್ದಾರೆ. ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಮಾತನಾಡಿದ ಅವರು, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವನ್ನು ಎದುರಿಸಲು ವಿಶ್ವದ ಯಾವುದೇ ತಂಡವಾದರೂ ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.
ಕೊಲಂಬೊದಲ್ಲಿ ಹೊಡೆದರೆ ಮದ್ರಾಸ್‌ನಲ್ಲಿ ಬೀಳುತ್ತೆ
ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಇತ್ತೀಚೆಗೆ ವಿಶ್ವಕಪ್ ಬಹಿಷ್ಕರಿಸುವ ಬಗ್ಗೆ ಮಾತನಾಡಿದ್ದನ್ನು ಉಲ್ಲೇಖಿಸಿದ ಶ್ರೀಕಾಂತ್, “ಪಾಕಿಸ್ತಾನವೇ, ನೀವು ಬಾರದೇ ಇರುವುದೇ ಲೇಸು. ನಿಮ್ಮ ಮುಖ್ಯಸ್ಥ ನಖ್ವಿ ಅವರು ಬಹಿಷ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ, ಅದನ್ನೇ ನೆಪವಾಗಿಟ್ಟುಕೊಂಡು ಬಾರದೇ ಉಳಿದುಬಿಡಿ. ಒಂದು ವೇಳೆ ಬಂದರೆ ಭಾರತದ ಹುಡುಗರು ನಿಮ್ಮನ್ನು ದೂಳೀಪಟ ಮಾಡುತ್ತಾರೆ. ಕೊಲಂಬೊದಲ್ಲಿ ಸಿಕ್ಸರ್ ಬಾರಿಸಿದರೆ ಅದು ಮದ್ರಾಸ್‌ನಲ್ಲಿ ಬಂದು ಬೀಳುವಷ್ಟರ ಮಟ್ಟಿಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಅಬ್ಬರವಿದೆ. ಹೀಗಾಗಿ ಅವಮಾನದಿಂದ ಪಾರಾಗಲು ವಿಶ್ವಕಪ್‌ಗೆ ಬಾರದಿರುವುದೇ ನಿಮಗೆ ಉಳಿದಿರುವ ದಾರಿ,” ಎಂದು ಚುಚ್ಚುಮಾತನಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ದಾಖಲೆಗಳ ಸರಮಾಲೆ
ಭಾನುವಾರ ಗುವಾಹಟಿಯಲ್ಲಿ ನಡೆದ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಕೇವಲ 10 ಓವರ್‌ಗಳಲ್ಲಿ 154 ರನ್‌ಗಳ ಗುರಿಯನ್ನು ಬೆನ್ನಟ್ಟಿ ದಾಖಲೆ ನಿರ್ಮಿಸಿತ್ತು. ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ, ನಾಯಕ ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಚಚ್ಚಿದರು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ 209 ರನ್‌ಗಳ ಗುರಿಯನ್ನು ಭಾರತ 15.2 ಓವರ್‌ಗಳಲ್ಲಿ ತಲುಪಿತ್ತು. “ಇದುವರೆಗೂ ಟಿ20 ಕ್ರಿಕೆಟ್‌ನಲ್ಲಿ ಇಂತಹ ಸ್ಫೋಟಕ್ ಬ್ಯಾಟಿಂಗ್ ಅನ್ನು ನಾನು ನೋಡಿಯೇ ಇಲ್ಲ. ಇದನ್ನು ಕಂಡು ಎದುರಾಳಿ ತಂಡಗಳು ಕಪ್ ನೀವೇ ಇಟ್ಟುಕೊಳ್ಳಿ ಎಂದು ಹೇಳಿ ಹೋಗುವಂತಿದೆ,” ಎಂದು ಶ್ರೀಕಾಂತ್ ಬಣ್ಣಿಸಿದ್ದಾರೆ.
ಅಭಿಷೇಕ್ ಶರ್ಮಾ ಆಟಕ್ಕೆ ಫಿದಾ
ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ‘ಎಫರ್ಟ್‌ಲೆಸ್’ (ಶ್ರಮರಹಿತ) ಬ್ಯಾಟಿಂಗ್ ಶೈಲಿಯನ್ನು ಶ್ರೀಕಾಂತ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಅವರು ರನ್ ಗಳಿಸಲು ಕಷ್ಟಪಡುತ್ತಿರುವಂತೆ ಕಾಣುವುದೇ ಇಲ್ಲ. ಅವರ ಬ್ಯಾಟ್ ಸ್ವಿಂಗ್ ಅದ್ಭುತವಾಗಿದೆ. ಮಿಡ್-ವಿಕೆಟ್, ಕವರ್ಸ್ ಕಡೆಗೆ ಅವರು ಲೀಲಾಜಾಲವಾಗಿ ಸಿಕ್ಸರ್ ಬಾರಿಸುತ್ತಿದ್ದಾರೆ. ಬೌಲರ್‌ಗಳಿಗೆ ಅವರಿಗೆ ಎಲ್ಲಿ ಬೌಲ್ ಮಾಡಬೇಕೆಂದೇ ತಿಳಿಯುತ್ತಿಲ್ಲ,” ಎಂದು ವಿಶ್ಲೇಷಿಸಿದ್ದಾರೆ.
ವಿಶ್ವಕಪ್ ಮತ್ತು ಪಾಕಿಸ್ತಾನದ ನಡೆ
ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಐಸಿಸಿ ಕಠಿಣ ಎಚ್ಚರಿಕೆ ನೀಡಿದ ಬಳಿಕ, ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಆದರೆ ಟೀಮ್ ಇಂಡಿಯಾದ ಪ್ರಸ್ತುತ ಫಾರ್ಮ್ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸಿರುವುದಂತೂ ಸುಳ್ಳಲ್ಲ.
ಇದನ್ನೂ ಓದಿ : ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ.. ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಬಾಯ್ಬಿಟ್ಟ ಆರೋಪಿ!



















