ಅದೊಂದು ಅಭಿವೃದ್ಧಿ ಶೂನ್ಯದಂತಿರುವ ದುಸ್ಥಿತಿಯ ಹಳ್ಳಿ. ಅಲ್ಲಿ ಹತ್ತಿರತ್ತಿರ ನಾನೂರು ಮನೆಗಳಿದ್ದು, ಮತದಾನದ ಹೊತ್ತಲ್ಲಿ ಮಾತ್ರ ರಾಜಕಾರಣಿಗಳಿಗೆ ಈ ಊರ ನೆನಪಾಗುತ್ತೆ. ಅಲ್ಲಿನ ಜನ ಈ ಬಗ್ಗೆ ಇನ್ನೂ ಆ ಮಟ್ಟಿಗೆ ರೊಚ್ಚಿಗೇಳದ ಪರಿಣಾಮ; ಸೌಲತ್ತು ವಂಚಿತ ಹಳ್ಳಿಯಾಗಿ ಆ ಊರ ಅಭಿವೃದ್ಧಿ ಕಾರ್ಯ ಹಳ್ಳ ಹಿಡಿದಿದೆ. ಅಸಲಿಗೆ ಏಳಜಿತ್ ಒಂದನೇ ವಾರ್ಡಿಗೆ ಸಂಬಂಧಿಸಿದಂತೆ, ಹೆಚ್ಚೂ-ಕಮ್ಮಿ ಕಳೆದ ಹದಿನೈದು ವರ್ಷಗಳಿಂದ, ಅಲ್ಲೊಂದು ಏಳೆಂಟು ಮನೆಗಳಿಗೆ ಮಳೆಗಾಲ ಬಂತೆಂದರೆ ಭಯ ಹುಟ್ಟಿಕೊಳ್ಳುತ್ತೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಮಾರ್ಗ ಮಧ್ಯದಲ್ಲಿ ಹರಿವ ನದಿ (ಕಾಲುವೆ) ಯಿಂದಾಗಿ ಉಸಿರು ಬಿಗಿ ಹಿಡಿದು, ಮಳೆಗಾಲ ಕಳೆವ ದುಸ್ಥಿತಿ ಆ ಮನೆಯವರದ್ದು!. ನಿಜಕ್ಕೂ ಅದು ದುಸ್ಥಿತಿ! ಅದೊಂದು ಮನೆಯ ಮಕ್ಕಳ ಪಾಡಂತೂ, ಆ ಭಗವಂತನಿಗೇ ಪ್ರೀತಿ!. ಒಂದೇ ಮನೆಯ ಇಬ್ಬರು ಮಕ್ಕಳು ಅಂಗವಿಕಲರು!. ನಡೆದಾಡಲು ಆಗದ ಪರಿಸ್ಥಿತಿ ಆ ಮಕ್ಕಳದ್ದಾದರೆ, ಅವರನ್ನು ಹೊತ್ತು ಸಾಗಿ ಶಾಲೆಗೆ ಬಿಡುವ ದಯನೀಯ ಸ್ಥಿತಿ, ಆ ಬಡ ತಂದೆ ತಾಯಿಗಳದ್ದು!.

ಉಡುಪಿ ಜಿಲ್ಲೆಯ, ಬೈಂದೂರು ತಾಲೂಕಿನ, ಏಳಜಿತ್ ಗ್ರಾಮಕ್ಕೆ(ಒಂದನೇ ವಾರ್ಡ್) ಸಂಬಂಧಿಸಿದ ಸುದ್ದಿ ಇದಾಗಿದ್ದು, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿವ, ಹುಲ್ಕಡಿಕೆ ನದಿ ನೀರು ಹಾದು ಹೋಗವ ತೀರದವರ ಸಮಸ್ಯೆಯಾಗಿದೆ. ಹುಲ್ಕಡಿಕೆಯಿಂದ ಹೊಸರಿ ನದಿಗೆ ಸೇರಿಕೊಳ್ಳುವ ಮಧ್ಯದಲ್ಲಿ, ಕಳೆದ ಹದಿನೈದು ವರ್ಷದಿಂದ ಈ ಭಾಗದ ಜನ ಪಡಬಾರದ ಪಾಡು ಪಡುತ್ತಿದ್ದರೂ, ಸಂಬಂಧಪಟ್ಟವರ ದಿವ್ಯ ನಿರ್ಲಕ್ಷವು, ಇಬ್ಬರು ವಿಶೇಷಚೇತನ ಮಕ್ಕಳೂ ಸೇರಿದಂತೆ, ಅನೇಕರು ಮಳೆಗಾಲದ ದಿನಗಳಲ್ಲಿ, ಹರಿವ ನೀರಲ್ಲಿ ನಿತ್ಯ ಜೀವ ಹಿಡಿದು ಮಾರ್ಗ ತಲುಪುವ ದುಸ್ಥಿತಿಯಲ್ಲಿದ್ದಾರೆ.
ಅದೊಂದು ದಲಿತ ಸಮುದಾಯ(ಎಸ್ಟಿ)ದ ಮನೆಯ ಎಂಟನೆ ತರಗತಿಯ ಗಂಡು ಮತ್ತು ಎಳನೇ ತರಗತಿ ಓದುತ್ತಿರುವ ಹೆಣ್ಣು ಮಗುವಿನ ಸಂಕಟ ತೀರಾ ದಯನೀಯವಾಗಿದೆ. ದಿನ ಬೆಳಗೆದ್ದರೇ, ಕಾಲು ಸ್ವಾಧೀನವಿಲ್ಲದ ಈ ವಿಶೇಷಚೇತನ ಮಕ್ಕಳನ್ನು ಹೊತ್ತು ಸಾಗಿ ಶಾಲೆಗೆ ಬಿಟ್ಟು-ಕರೆತರುವ ಕೆಲಸ ಆ ತಂದೆ ತಾಯಿಯರದ್ದು. ಅದರಲ್ಲೂ ಮಳೆಗಾಲದಲ್ಲಿ ಆ ಮನೆಯವರ ಪಾಡು ಅತಿ ಕಷ್ಟದ್ದಾಗಿದೆ. ಆ ಮಕ್ಕಳನ್ನು ಹೊತ್ತು, ಆ ಹರಿವ ನೀರಲ್ಲಿ ಸಾಗುವ ದಿನ ನಿತ್ಯದ ಕಷ್ಟಕ್ಕೆ ಶಪಿಸಿ ಸಾಕಾಗಿದೆ. ಆ ಮಕ್ಕಳು ತಂದೆ-ತಾಯಿಯರ ಪಾಡು, ಕಂಡವರಿಗೆ ಕರುಳು ಕಿವುಚಿದರೂ; ಸಂಬಂಧಪಟ್ಪವರಿಗೆ ಈ ಕಷ್ಟ ಕಾಣಿಸುತ್ತಿಲ್ಲ ಎಂಬುದು ದುರ್ದೈವ!.
ಈ ಬಡ ಕುಟುಂಬ ಹಾಗೂ ಆ ವಾರ್ಡಿನ ವಾಸಿಗಳು ತಮ್ಮ ಕಷ್ಟ ಹೇಳಿಕೊಂಡು ವರ್ಷಗಟ್ಟಲೆ ಅಲೆದರೂ; “ಮಾಡಿಸುತ್ತೇವೆ, ನಮ್ಮಲ್ಲಿ ಅಷ್ಟು ಅನುದಾನವಿಲ್ಲ, ಅನುದಾನ ಬಂದಿಲ್ಲ, ಇದು ಮೇಲಿನವರ ತೀರ್ಮಾನ; ನಮ್ಮದಲ್ಲ, ಬರಿಯ ನಾಲ್ಕಾರು ಮನೆಗೆ ಸೌಲಭ್ಯ ಕಷ್ಟ” ಎಂಬಂಥ ಸಬೂಬು ಹೇಳಿ ಕಾಲ ಕಳೆಯುತ್ತಲೇ ಬಂದಿದ್ದಾರೆ. ಯಾರದ್ದೋ ಮನೆಯ ಮಕ್ಕಳ ಹೆಣ ಬಿದ್ದಾಗಲೇ ಇವರು ಎಚ್ಚೆತ್ತುಕೊಳ್ಳೋದಾ? ಗೊತ್ತಿಲ್ಲ!. ಇವರ ನಿರ್ಲಕ್ಷಕ್ಕೆ ನಮ್ಮ ಧಿಕ್ಕಾರವಿದೆ! ನಮ್ಮ ಪತ್ರಿಕೆಗೆ ಸಿಕ್ಕ ಮಾಹಿತಿ ಪ್ರಕಾರ ಸಂಸದ ರಾಘವೇಂದ್ರ ತಮ್ಮ ಅನುದಾನದ ಅಡಿಯಲ್ಲಿ ಇಲ್ಲಿಗೊಂದು ಸೇತುವೆಗೆ (ಸಣ್ಣ ಪ್ರಮಾಣ) ಮಂಜೂರು ಮಾಡಿಸಿದ್ದರಂತೆ. ನಂತರದಲ್ಲಿ ಬದಲಾದ ಸರ್ಕಾರವು, ಆ ಮಂಜೂರಾತಿಯನ್ನು ರದ್ದು ಪಡಿಸಿದ ಪರಿಣಾಮ, ಬಂದಿದ್ದ ಅನುದಾನ ವಾಪಸ್ಸಾಗಿತ್ತಂತೆ! ಛೇ! ಈ ಹಾಳು ರಾಜಕೀಯಕ್ಕೆ ಬಡವರ ಮನೆಯ ಕಾಲಿಲ್ಲದ ಮಕ್ಕಳ ಗೋಳು ಸಹ ಕೇಳಿಲ್ಲವಲ್ಲ! ಅವರಿಗೆ ಆ ಮನೆಮಂದಿಯ ಹಿಡಿಶಾಪ ತಟ್ಟದೇ ಇದ್ದೀತೇ?

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಈ ವಾರ್ಡಿಗೆ ಮತಯಾಚನೆಗೆ ಬಂದಿದ್ದ ಸಂದರ್ಭದಲ್ಲಿ, ಅಲ್ಲಿನ ಸಮಸ್ಯೆಗೆ ಪರಿಹಾರದ ಆಶ್ವಾಸನೆ ಕೊಟ್ಟಿದ್ದ ಈಗಿನ ಶಾಸಕ ಗುರುರಾಜ್ ಗಂಟಿಹೊಳೆ, ಇಂದು (ಜು.2) ಅಲ್ಲಿಗೆ ಭೇಟಿಕೊಟ್ಟು ಸ್ಥಳ ಪರಿಶೀಲಿಸಿ, ಸಮಸ್ಯೆಗೆ ಶೀಘ್ರ ಪರಿಹಾರದ ಭರವಸೆಕೊಟ್ಟರು. ವಿಶೇಷವಾಗಿ ಆ ವಿಶೇಷಚೇತನ ಮಕ್ಕಳ ಮನೆಯವರಿಗೆ ಮಳೆಗಾಲ ಮುಗಿಯುವವರೆಗೂ ಅನುಕೂಲವಾಗುವಂತೆ, ಕೆಲ ದಿನಗಳಲ್ಲೇ ಶಾಲೆಯ ಸಮೀಪವೇ ಬಾಡಿಗೆ ಮನೆ ಕೊಡಿಸುವ ಭರವಸೆ ನೀಡಿ ಸಂತೈಸಿದರು.

ಒಟ್ಟಿನಲ್ಲಿ ಇಷ್ಟು ವರ್ಷದ ಕಷ್ಟಕ್ಕೆ ಈಗೊಂದು ಮುಕ್ತಿ ಸಿಗುವ ಸೂಚನೆ ಸಿಕ್ಕಂತಿದೆ. ಶಾಸಕರ ಮಾತಿನಂತೆ ಅಲ್ಲೊಂದು ಪರಿಹಾರ ಸಿಕ್ಕಿ, ವಿಶೇಷಚೇತನ ಮಕ್ಕಳು ಹಾಗೂ ಆ ಊರಿನವರ ತೊಂದರೆ ತೊಡೆದು ಹೋಗಲಿ ಎಂಬ ಕಳ-ಕಳಿ ನಮ್ಮದು.