ಕ್ಯಾಂಡಿ (ಶ್ರೀಲಂಕಾ) : 2026ರ ಟಿ20 ವಿಶ್ವಕಪ್ನ ಸೂಪರ್-8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ಕ್ರಿಕೆಟ್ನಲ್ಲಿ ಅಂತರ್ಯುದ್ಧ ಶುರುವಾಗಿದೆ. ತಂಡದ ಪ್ರಮುಖ ಬ್ಯಾಟರ್ ಬಾಬರ್ ಅಜಮ್ ಅವರ ಮಂದಗತಿಯ ಬ್ಯಾಟಿಂಗ್ ಶೈಲಿಯನ್ನು ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಇಮಾದ್ ವಾಸಿಮ್ ಕಟುವಾಗಿ ಟೀಕಿಸಿದ್ದಾರೆ. ಬಾಬರ್ ಅವರ ಆಟವನ್ನು ವಾಸಿಮ್ “ಕ್ರಿಮಿನಲ್ ಅಪರಾಧ” ಎಂದು ಕರೆದಿದ್ದು, ಈಗ ಈ ಹೇಳಿಕೆ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಬರ್ ಅಜಮ್ 4ನೇ ಓವರ್ನಲ್ಲೇ ಕ್ರೀಸ್ಗೆ ಬಂದಿದ್ದರು. ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ಸುವರ್ಣ ಅವಕಾಶ ಅವರ ಮುಂದಿತ್ತು. ಆದರೆ, 24 ಎಸೆತಗಳನ್ನು ಎದುರಿಸಿ ಕೇವಲ 25 ರನ್ ಗಳಿಸಿದ ಬಾಬರ್, ಜೇಮಿ ಓವರ್ಟನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಈ ಕುರಿತು ರಾಷ್ಟ್ರೀಯ ದೂರದರ್ಶನದಲ್ಲಿ ಮಾತನಾಡಿದ ಇಮಾದ್ ವಾಸಿಮ್, “ಬಾಬರ್ ಎಷ್ಟು ಪಂದ್ಯಗಳನ್ನು ಹೀಗೆ ಹಾಳು ಮಾಡುತ್ತಾರೆ? 24 ಎಸೆತಗಳನ್ನು ಆಡಿ, ಪಿಚ್ ಹೇಗಿದೆ ಎಂದು ಅರಿತುಕೊಂಡ ನಂತರವೂ ಕಳಪೆ ಶಾಟ್ ಆಡಿ ಔಟಾಗುವುದು ಅಕ್ಷರಶಃ ಕ್ರಿಮಿನಲ್ ಅಪರಾಧ. ಇಷ್ಟು ಅನುಭವವಿರುವ ಆಟಗಾರನಿಂದ ಇದನ್ನು ಯಾರೂ ನಿರೀಕ್ಷಿಸುವುದಿಲ್ಲ,” ಎಂದು ಗುಡುಗಿದ್ದಾರೆ.
ಹ್ಯಾರಿ ಬ್ರೂಕ್ ನೋಡಿ ಕಲಿಯಲಿ!
ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಅಬ್ಬರದ ಶತಕ ಸಿಡಿಸಿ ತಮ್ಮ ತಂಡವನ್ನು ಸೆಮಿಫೈನಲ್ಗೆ ಕರೆದೊಯ್ದಿದ್ದನ್ನು ಉದಾಹರಿಸಿದ ಇಮಾದ್, “ಹ್ಯಾರಿ ಬ್ರೂಕ್ ನೋಡಿ ಕಲಿಯಿರಿ. ಅವರು ಒಬ್ಬರೇ ನಿಂತು ಪಂದ್ಯವನ್ನು ಗೆಲ್ಲಿಸಿದರು. ಬಾಬರ್ ಅಜಮ್ ದೊಡ್ಡ ಪಂದ್ಯಗಳಲ್ಲಿ ಅಥವಾ ವಿಶ್ವಕಪ್ನ ನಾಕೌಟ್ ಪಂದ್ಯಗಳಲ್ಲಿ ಯಾವಾಗ ತಂಡವನ್ನು ಗೆಲ್ಲಿಸುತ್ತಾರೆ? ಕೇವಲ ದುರ್ಬಲ ತಂಡಗಳ ವಿರುದ್ಧ ರನ್ ಗಳಿಸುವುದು ಸಾಧನೆಯಲ್ಲ,” ಎಂದು ಸವಾಲು ಎಸೆದಿದ್ದಾರೆ.
“ಸಾರ್ವಜನಿಕರನ್ನು ಮರಳು ಮಾಡಲಾಗುತ್ತಿದೆ”
ಬಾಬರ್ ಅಜಮ್ ಪರವಾಗಿ ನಡೆಯುವ ಸಾಮಾಜಿಕ ಜಾಲತಾಣಗಳ ಅಭಿಯಾನಗಳ ಬಗ್ಗೆಯೂ ಇಮಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮಲ್ಲಿ ಯಾರನ್ನಾದರೂ ಸುಲಭವಾಗಿ ಹೀರೋ ಮಾಡಬಹುದು. ಬಾಬರ್ ಪರವಾಗಿ ದೊಡ್ಡ ಕ್ಯಾಂಪೇನ್ಗಳು ನಡೆಯುತ್ತಿವೆ. ಆದರೆ ಅಂಕಿಅಂಶಗಳನ್ನು ನೋಡಿ, 2019ರ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು 2021ರಲ್ಲಿ ಭಾರತದ ವಿರುದ್ಧದ ಇನ್ನಿಂಗ್ಸ್ ಬಿಟ್ಟರೆ, ಅವರು ಪ್ರಭಾವ ಬೀರಿದ ಮತ್ತೊಂದು ಇನ್ನಿಂಗ್ಸ್ ತೋರಿಸಿ,” ಎಂದು ಬಾಬರ್ ಅಭಿಮಾನಿಗಳಿಗೆ ನೇರ ಪ್ರಶ್ನೆ ಹಾಕಿದ್ದಾರೆ.
ಕಿಸ್ತಾನಕ್ಕೆ ಸೆಮಿಫೈನಲ್ ಹಾದಿ ಬಂದ್?
ಇಂಗ್ಲೆಂಡ್ ವಿರುದ್ಧದ ಸೋಲಿನೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಆಸೆ ಬಹುತೇಕ ಮಣ್ಣುಪಾಲಾಗಿದೆ. ಈಗ ಪಾಕಿಸ್ತಾನ ತಂಡಕ್ಕೆ ಉಳಿದಿರುವುದು ಶ್ರೀಲಂಕಾ ವಿರುದ್ಧದ ಪಂದ್ಯ ಮಾತ್ರ. ಆದರೆ ಆ ಪಂದ್ಯ ಗೆದ್ದರೂ ಇತರ ತಂಡಗಳ ಫಲಿತಾಂಶದ ಮೇಲೆ ಪಾಕಿಸ್ತಾನ ಅವಲಂಬಿತವಾಗಬೇಕಿದೆ. ಬಾಬರ್ ಅವರ ‘ರನ್-ಎ-ಬಾಲ್’ ಬ್ಯಾಟಿಂಗ್ ಶೈಲಿ ಟಿ20 ಕ್ರಿಕೆಟ್ಗೆ ಹೊರೆಯಾಗುತ್ತಿದೆ ಎಂಬ ವಾದ ಈಗ ಪಾಕಿಸ್ತಾನದಲ್ಲಿ ಜೋರಾಗಿದೆ.
ಇದನ್ನೂ ಓದಿ : ಮದ್ಯದಂಗಡಿ ಬಂದ್ಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ!



















