ಬೆಂಗಳೂರು: ಐಟಿ ರಿಟರ್ನ್ಸ್ ಸಲ್ಲಿಸುವವರಿಗೆ ಆದಾಯ ತೆರಿಗೆ ಇಲಾಖೆಯು ಗುಡ್ ನ್ಯೂಸ್ ನೀಡಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಇರುವ ಕಾಲಾವಧಿಯನ್ನು ಸೆಪ್ಟೆಂಬರ್ 15ಕ್ಕೆ ವಿಸ್ತರಿಸಿರುವುದರಿಂದ ರಿಟರ್ನ್ಸ್ ಸಲ್ಲಿಸುವವರಿಗೆ ಅನುಕೂಲವಾಗುತ್ತದೆ. ಇನ್ನು, ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಪಾವತಿಸಲೂ ಕೂಡ ಅಲ್ಲಿಯವರೆಗೆ ಕಾಲಾವಕಾಶ ಇರುತ್ತದೆ. ಇದಕ್ಕೂ ಮೊದಲು, ಜುಲೈ 31ರೊಳಗೆ ಟ್ಯಾಕ್ಸ್ ಕಟ್ಟಬೇಕಿತ್ತು. ಅದಾದ ಬಳಿಕ ಪಾವತಿಸಿದರೆ ದಂಡ ತೆರಬೇಕಾಗುತ್ತಿತ್ತು. ಈಗ ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ಇರುತ್ತದೆ. ಇನ್ನು, ಸೆಪ್ಟೆಂಬರ್ 15 ಕೊನೆಯ ದಿನವಾಗಿರುವುದರಿಂದ, ಇದರ ನಂತರ ಫೈಲ್ ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ.
ಎಷ್ಟು ದಂಡ ಬೀಳುತ್ತದೆ?
ಸೆಪ್ಟೆಂಬರ್ 15ರಂದ ನಂತರ 2024-25ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ ದಂಡ ಬೀಳುತ್ತದೆ. ಐಟಿಆರ್ ಸಲ್ಲಿಸುವವರ ಆದಾಯವು ಒಂದು ವರ್ಷಕ್ಕೆ 5 ಲಕ್ಷ ರೂಪಾಯಿ ಇದ್ದರೆ, ಅವರು ತಡವಾಗಿ ಐಟಿಆರ್ ಸಲ್ಲಿಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಒಂದು ಲಕ್ಷ ರೂಪಾಯಿ ಆದಾಯ ಇರುವವರಿಗೆ 1 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಇದರಿಂದ ಪಾರಾಗಲು ನಿಗದಿತ ದಿನಾಂಕದೊಳಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ.
ತಪ್ಪು ಮಾಹಿತಿ ನೀಡಿದರೂ ದಂಡ
ಆದಾಯ ತೆರಿಗೆ ರಿಟರ್ನ್ (ಐಟಿಆರ್) ನಿಯಮಗಳ ಹೊಸ ಬದಲಾವಣೆಗಳ ಪ್ರಕಾರ, ತಪ್ಪು ಮಾಹಿತಿ ನೀಡಿದರೆ ಅಥವಾ ಆದಾಯವನ್ನು ಮುಚ್ಚಿಟ್ಟರೆ ತೆರಿಗೆದಾರರಿಗೆ ಭಾರಿ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ. ಐಟಿಆರ್ ಹೊಸ ನಿಯಮಗಳ ಪ್ರಕಾರ, ತೆರಿಗೆದಾರರು ತಪ್ಪು ಮಾಹಿತಿ ನೀಡಿದರೆ, ಅವರು ಪಾವತಿಸಬೇಕಾದ ತೆರಿಗೆಯ ಮೇಲೆ 200% ವರೆಗೆ ದಂಡ, ವಾರ್ಷಿಕ 24% ಬಡ್ಡಿ ಮತ್ತು ಸೆಕ್ಷನ್ 276C ಅಡಿಯಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗಬಹುದು. ಹಾಗಾಗಿ ತೆರಿಗೆದಾರರು ಎಚ್ಚರಿಕೆಯಿಂದ ಐಟಿಆರ್ ಸಲ್ಲಿಸಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳು ಎಲ್ಲ ರೀತಿಯ ತೆರಿಗೆದಾರರಿಗೂ ಅನ್ವಯಿಸುತ್ತವೆ. ಈ ನಿಯಮವು ಸಂಬಳ ಪಡೆಯುವ ವ್ಯಕ್ತಿಗಳು, ಸ್ವತಂತ್ರ ಉದ್ಯೋಗಿಗಳು, ವೃತ್ತಿಪರರು ಮತ್ತು ವ್ಯವಹಾರಗಳು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಇಲಾಖೆ ತಿಳಿಸಿದೆ.



















