ಕಲಬುರಗಿ: ಅಣ್ಣ ಯುವತಿಯನ್ನು ಪ್ರೀತಿಸಿದ್ದಕ್ಕೆ ಸಹೋದರ ಕೊಲೆಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಯುವಕ ಸುಮಿತ್ ಭೀಕರವಾಗಿ ಕೊಲೆಯಾದ ದುರ್ದೈವಿ. ಕೊಲೆಯಾಗಿರುವ ಸುಮಿತ್ ತಂದೆ-ತಾಯಿಯೊಂದಿಗೆ ಮುಂಬಯಿನಲ್ಲಿ ವಾಸಿಸುತ್ತಿದ್ದ. ಕಳೆದ ವಾರವಷ್ಟೇ ತಾಯಿಯೊಂದಿಗೆ ಕಲಬುರಗಿಗೆ ಬಂದಿದ್ದ.
ಇದೇ ಊರಲ್ಲಿ ಸುಮಿತ್ ಸಹೋದರ ಸಚಿನ್ ಕೂಡ ವಾಸವಾಗಿದ್ದ. ಸಚಿನ್ ನಾಗನಹಳ್ಳಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಹಲವು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರು. ಆದರೂ ಅವರಿಬ್ಬರು ಮಾತ್ರ ಪ್ರೀತಿಸುವುದನ್ನು ಬಿಟ್ಟಿಲ್ಲ
ಇದರಿಂದ ಕೋಪಗೊಂಡ ಯುವತಿಯ ಸಹೋದರ ತನ್ನ ಕೆಲವು ಸ್ನೇಹಿತರೊಂದಿಗೆ ಸಚಿನ್ ನ ಮನೆಗೆ ಹೋಗಿದ್ದಾನೆ. ಆಗ ಸಚಿನ್ ಮನೆಯಲ್ಲಿ ಇಲ್ಲ. ಆದರೆ, ಆತನ ತಾಯಿ ಮತ್ತು ಸಹೋದರ ಸುಮಿತ್ ಇದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ. ಆಗ ಗಲಾಟೆ ಜೋರಾಗಿ ಸುಮಿತ್ ನನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತನ್ನ ಕಣ್ಣೆದುರೇ ಮಗ ಸಾವನ್ನಪ್ಪಿರುವುದನ್ನು ಕಂಡು ತಾಯಿ ಗೋಳಾಡಿದ್ದಾರೆ.
ಕೂಡಲೇ ಸುಮಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.