ಆನೇಕಲ್: ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಗೃಹಸಚಿವ ಡಾ.ಪರಮೇಶ್ವರ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮಾಡಿ ಈಗಾಗಲೇ 7 ಸಿಬ್ಬಂದಿ ಅಮಾನತು ಮಾಡಲಾಗಿದೆ. ಅಧೀಕ್ಷಕ ಮಲ್ಲಿಕಾರ್ಜುನಸ್ವಾಮಿ, ಶೇಷಮೂರ್ತಿಯಿಂದ ಲೋಪವಾಗಿದೆ. ಈ ಇಬ್ಬರನ್ನೂ ಅಮಾನತು ಮಾಡಿದ್ದೇವೆ.. ಜೈಲಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆದಿರುವುದು ನಿಜ ಎಂದು ಹೇಳಿದ್ದಾರೆ.
ಸಿ ನಿಯಮಗಳನ್ನು ಮೀರಿ ಆರೋಪಿಗಳಿಗೆ ಟೀ, ಸಿಗರೇಟ್ ಮತ್ತಿತರ ಸವಲತ್ತುಗಳನ್ನು ಪೂರೈಕೆಯಾಗಿದೆ. ದಿನದ 24 ಗಂಟೆಯೂ ವಾರ್ಡರ್‌ಗಳು ಕರ್ತವ್ಯದಲ್ಲಿರುತ್ತಾರೆ. ಘಟನೆ ಎಲ್ಲರ ಕಣ್ತಪ್ಪಿ ನಡೆಯಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ಗರೇಟ್, ಟೀ, ಕುರ್ಚಿ ಯಾರು ತಂದು ಕೊಟ್ಟಿದ್ದರು ಎಂಬ ಕುರಿತು ಈಗ ತನಿಖೆ ನಡೆಯುತ್ತಿದೆ. ಜೈಲಿನ ವಾರ್ಡನ್ ಸೇರಿದಂತೆ ಹಲವರ ವಿರುದ್ಧ ಮೂರು ಎಫ್ ಐಆರ್ ದಾಖಲಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಎಲ್ಲಾ ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಸಿಸಿಕ್ಯಾಮರಾ ಹಾಕಲಾಗುವುದು. ಈ ಕುರಿತು ಪ್ರಾಮಾಣಿಕವಾಗಿ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಮೊಬೈಲ್ ಬಳಕೆಯಾಗುತ್ತಿದೆ ಎಂಬುದು ಕಂಡು ಬಂದಿದೆ. ರಾಜ್ಯದಲ್ಲಿನ ಎಲ್ಲ ಬಂಧಿಖಾನೆಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಾರಾಗೃಹ ಮತ್ತು ಸುಧಾರಣಾ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.