ರಾಜ್ಯ ಸರ್ಕಾರ ದಿವಾಳಿಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು 60 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದಾರೆ. ಆದರೆ, ಅವರು ತುಂಬಾ ಲೇಟ್ ಆಗಿ ಈ ಕುರಿತು ಹೇಳಿದ್ದಾರೆ. ಮೊದಲು 40 ಪರ್ಸೆಂಟ್ ಇದ್ದ ಸರ್ಕಾರ ಈಗ 60 ಪರ್ಸೆಂಟ್ ಆಗಿದೆ. ಈ ಸರ್ಕಾರ ಕಳೆದ 6 ತಿಂಗಳ ಹಿಂದೆಯೇ 60 ಪರ್ಸೆಂಟ್ ಸರ್ಕಾರ ಆಗಿದೆ. ಆದರೆ, ಕುಮಾರಣ್ಣ ಇದನ್ನು ಲೇಟ್ ಆಗಿ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸರ್ಕಾರಕ್ಕೆ ಗುತ್ತಿಗೆದಾರರ ಹಣ ಕೊಡಲು ಆಗುತ್ತಿಲ್ಲ. ಅಂದಾಜು 32 ಸಾವಿರ ರೂ. ಹಣವನ್ನು ಗುತ್ತಿಗೆದಾರರಿಗೆ ಕೊಡಬೇಕು. ಮುಂದಿನ ದಿನಗಳಲ್ಲಿ ಈ ಸರ್ಕಾರ ಕೆರೆ, ಬಾವಿ, ಹಳ್ಳ, ಕೊಳ್ಳಗಳಿಗೂ ತೆರಿಗೆ ವಿಧಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಸರ್ಕಾರ ದಿವಾಳಿ ಆಗುತ್ತಿದೆ. ಇದು ನುಡಿದಂತೆ ನಡೆದ ಸರ್ಕಾರ ಅಲ್ಲ. ಮನೆಹಾಳು ಮಾಡುವ ಸರ್ಕಾರ ಇದು. ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಾರೆ. ಆದರೆ, ಅಭಿವೃದ್ಧಿ ಮಾತ್ರ ಇಲ್ಲ. ಮಾತು ಎತ್ತಿದರೆ, ಸಂವಿಧಾನ ಕೈಯಲ್ಲಿ ಹಿಡಿದು ನಿಲ್ಲುತ್ತಾರೆ. ಎರಡು ಬಾರಿ ಸೋಲಿಸಿದ್ದಲ್ಲದೇ, ಸಂವಿಧಾನ ಶಿಲ್ಪಿಗೆ ಎರಡ್ಮೂರು ಅಡಿ ಜಾಗ ಕೂಡ ಈ ಕಾಂಗ್ರೆಸ್ ಗೆ ಕೊಡಲು ಆಗಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಗುತ್ತಿಗೆದಾರರು ಕೂಡ 60 ಪರ್ಸೆಂಟ್ ವಿರುದ್ಧ ಆರೋಪ ಮಾಡಿದ್ದಾರೆ. ಇಲ್ಲಿಯವರೆಗೆ ಗುತ್ತಿಗೆದಾರರಿಗೆ 32 ಸಾವಿರ ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು. ತೊಗರಿ ಖರೀದಿ ಮಾಡಲು ಈ ಸರ್ಕಾರದ ಬಳಿ ಹಣವಿಲ್ಲ. ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ಸಿದ್ದರಾಮಯ್ಯ ಜನಪ್ರಿಯ ಬಜೆಟ್ ಎಂದು ಹೇಳುತ್ತಾರೆ. 3.22.350 ಕೋಟಿ ರೂ. ಬಜೆಟ್ ಇದ್ದಿದ್ದು, ಇಲ್ಲಿಯವರೆಗೆ 1.78.370 ರೂ. ಮಾತ್ರ ಖರ್ಚು ಮಾಡಿದ್ದಾರೆ.
ಬಿಜೆಪಿ ಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಅಂತಾರೆ. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಗಂಗಾ ಕಲ್ಯಾಣಕ್ಕೆ ನಾವು 60 ಕೋಟಿ ರೂ. ನೀಡಿದ್ದೇವೆ. ಆದರೆ, ಕಾಂಗ್ರೆಸ್ 40 ಕೋಟಿ ರೂ. ನೀಡಿದೆ. ಸೆಲ್ಫ್ ಎಂಪ್ಲಾಯ್ಮೆಂಟ್ ಸ್ಕೀಮ್ ಗೆ ನಾವು 120 ಕೋಟಿ ರೂ. ನೀಡಿದ್ದೇವೆ. ಆದರೆ, ಕಾಂಗ್ರೆಸ್ ಕೇವಲ 60 ಕೋಟಿ ರೂ. ನೀಡಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ 95 ಕೋಟಿ ರೂ. ನಾವು ನೀಡಿದ್ದೇವೆ. ಕಾಂಗ್ರೆಸ್ 55 ಕೋಟಿ ರೂ. ನೀಡಿದೆ.
ಈ ಸರ್ಕಾರವು ರಾಜ್ಯವನ್ನು ಕತ್ತಲೆಗೆ ತಳ್ಳುತ್ತಿದೆ. 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದದ್ದನ್ನು 60ಕ್ಕೆ ಏರಿಸಿತ್ತು. ಈಗ ಮತ್ತಷ್ಟು ಹೆಚ್ಚಿಸಲು ಮೀಟಿಂಗ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.