ಬೆಂಗಳೂರು: ಎತ್ತಿನಹೊಳೆ ಯೋಜನೆ ಮೊದಲ ಹಂತಕ್ಕೆ ತಾವೇ ಚಾಲನೆ ನೀಡುತ್ತಿರುವುದು “ರಾಜಕೀಯ ಜೀವನದ ಇನ್ನೊಂದು ಸಾರ್ಥಕ ಕ್ಷಣ. ಇದು ನನ್ನ ರಾಜಕೀಯ ಜೀವನದ ಮರೆಯಲಾಗದ ಕ್ಷಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿನಹೊಳೆ ಯೋಜನೆ ಕುರಿತು ಪೋಸ್ಟ್ ಮಾಡಿರುವ ಅವರು, 2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿ, ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿ, ಬರದ ಭೂಮಿಗೆ ಜೀವ ಜಲವನ್ನುಣಿಸಲು ಸಿದ್ಧವಾಗಿ ನಿಂತಿದೆ. ಇದು ನನ್ನ ರಾಜಕೀಯ ಜೀವನದ ಇನ್ನೊಂದು ಸಾರ್ಥಕ ಕ್ಷಣ ಎಂದು ಬರೆದುಕೊಂಡಿದ್ದಾರೆ.
ಈ ಯೋಜನೆಯಿಂದ ಮಳೆಗಾಲದಲ್ಲಿ ಸಮುದ್ರ ಪಾಲಾಗುತ್ತಿದ್ದ 24.01 ಟಿಎಂಸಿ ನೀರಿನ ಉಪಯೋಗ ಆಗಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ 7 ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶದಲ್ಲಿನ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ಒದಗಿಸಲಿದೆ.
14.05 ಟಿಎಂಸಿ ಹಾಗೂ ಕೆರೆ ತುಂಬಿಸಲು 9.95 ಟಿಎಂಸಿ ನೀರು ಬಳಕೆಯಾಗಲಿದೆ. 23,251 ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆಗಾಗಿ ಇಲ್ಲಿಯವರೆಗೆ 16,152 ಕೋಟಿ ರೂ. ವೆಚ್ಚ ಮಾಡಲಾಗಿದೆ.