ವೈದ್ಯಕೀಯ ಸಿಬ್ಬಂದಿಗಳು ಇನ್ನು ಮುಂದೆ ಸರ್ಕಾರಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡುವುದು ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಿದೆ.
ಇತ್ತೀಚೆಗೆ ಆಸ್ಪತ್ರೆಯಲ್ಲಿ ಸಾವು-ನೋವಿನ ವರದಿಗಳು ಹೆಚ್ಚಾಗಿ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ವೈದ್ಯರು, ಸಿಬ್ಬಂದಿಗಳ ವಸತಿ ಗೃಹಗಳು ಇದ್ದರೂ ಅವಗಳನ್ನು ಬಳಸದ ಹಿನ್ನೆಲೆಯಲ್ಲಿ ಅವು ಶಿಥಿಲಾವಸ್ಥೆಗೆ ತಲುಪುತ್ತಿವೆ. ಇದರಿಂದ ಸರ್ಕಾರದ ದುಡ್ಡು ಸುಖಾಸುಮ್ಮನೆ ಪೋಲಾಗುತ್ತಿದೆ.
ದುರಸ್ಥಿ ಮಾಡದಷ್ಟು ಶಿಥಿಲಗೊಂಡ ವಸತಿ ಗೃಹಗಳಿಂದ ಸರ್ಕಾರಕ್ಕೆ ಭಾರೀ ನಷ್ಟವಾಗುತ್ತಿವೆ.
ಆರೋಗ್ಯ ಕಾರ್ಯಕ್ರಮ, ತುರ್ತು ಸೇವೆಗಳ ಹಿನ್ನೆಲೆಯಲ್ಲಿ ಸರ್ಕಾರವು ಆರೋಗ್ಯ ಸಿಬ್ಬಂದಿಗಳಿಗೆ ಗೃಹ ಸೌಲಭ್ಯ ಒದಗಿಸುತ್ತಿದೆ. ಆದರೆ, ವಸತಿ ಗೃಹ ಬಳಕೆ ಮಾಡದಿರುವುದರಿಂದಾಗಿ ಭಾರೀ ನಷ್ಟ ಉಂಟಾಗುತ್ತಿದೆ. ಇದರೊಂದಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗದೆ ರೋಗಿಗಳು ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಕುರಿತು ಇಲಾಖೆಗೆ ಸಾಕಷ್ಟು ದೂರುಗಳು ಹರಿದು ಬಂದಿವೆ.
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ಉಳಿಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.