ಇತ್ತೀಚಿನ ಕೆಲವು ವರ್ಷಗಳಲ್ಲಿ ಐಟಿ ಕಂಪನಿಗಳಲ್ಲಿ ಉದ್ಯೋಗ ಖಾಲಿ ಇಲ್ಲ ಎಂಬ ನಾಮಫಲಕ ಹಾಕಿದಂತಿತ್ತು. ವಿದ್ಯಾವಂತರು ಕೆಲಸಕ್ಕಾಗಿ ಪರದಾಡುವ ಸ್ಥಿತಿ ಇತ್ತು. ಇದು ಉದ್ಯೋಗ ಹುಡುಕುವವರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಐಟಿ ಕಂಪನಿಗಳು ಮತ್ತೆ ಎದ್ದು ನಿಂತಿದ್ದು, ಹೊಸಬರಿಗೆ ಉದ್ಯೋಗ ನೀಡಲು ಮುಂದಾಗಿವೆ.
ದೇಶದಲ್ಲಿನ ಪ್ರಮುಖ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್, ಎಚ್ ಸಿಎಲ್ ಟೆಕ್, ವಿಪ್ರೋ ಹಾಗೂ ಟೆಕ್ ಮಹೀಂದ್ರಾ ಕಂಪನಿಗಳು ಈಗ ಕಾಲೇಜು ಕ್ಯಾಂಪಸ್ ನತ್ತ ಮುಖಮಾಡಿವೆ. ಹೊಸ ಪ್ರತಿಭಾವಂತರನ್ನು ಹುಡುಕಿಕೊಂಡು ಎಂಜಿನಿಯರಿಂಗ್ ಕಾಲೇಜುಗಳ ಬಾಗಿಲು ತಟ್ಟಲು ಮುಂದಾಗಿವೆ. ಹೀಗಾಗಿ ಈಗತಾನೇ ಎಂಜಿನಿಯರಿಂಗ್ ಮುಗಿಸಿರುವ ವಿದ್ಯಾರ್ಥಿಗಳು ಹಾಗೂ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳು ಖುಷಿ ಪಡುವಂತಾಗಿದೆ.
2024ನೇ ಆರ್ಥಿಕ ವರ್ಷದಲ್ಲಿ ಕನಿಷ್ಠ ಮೂರು ತ್ರೈಮಾಸಿಕಗಳ ಕಾಲ ಹೊಸಬರ ನೇಮಕವನ್ನು ರದ್ದುಗೊಳಿಸಿದ್ದ ಇನ್ಫೋಸಿಸ್ ಫ್ರೆಷರ್ ನೇಮಕಕ್ಕೆ ಮುಂದಾಗಿದೆ. ಈ ವರ್ಷ 15 ಸಾವಿರದಿಂದ 20 ಸಾವಿರದಷ್ಟು ಹೊಸಬರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.
2024ರಲ್ಲಿ ಕಂಪನಿ 11,900 ಹೊಸಬರಿಗೆ ಉದ್ಯೋಗ ನೀಡಿತ್ತು. ಆದರೆ, 2023ರಲ್ಲಿ 50 ಸಾವಿರ ಜನರಿಗೆ ನೇಮಕಾತಿ ನೀಡಿತ್ತು.
ಎಚ್‌ಸಿಎಲ್ ಟೆಕ್ 2024ರಲ್ಲಿ 12,141 ಹೊಸಬರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡಿತ್ತು. 2023ರ 26,734 ನೇಮಕಕ್ಕೆ ಹೋಲಿಸಿದರೆ ಕಂಪನಿಯ ನೇಮಕದಲ್ಲಿ ಅರ್ಧದಷ್ಟು ಕಡಿಮೆಯಾಗಿತ್ತು. ಆದರೆ, ಈ ವರ್ಷ 10,000 ದಿಂದ 12,000 ಜನರಿಗೆ ಉದ್ಯೋಗ ನೀಡಲು ಮುಂದಾಗಿದೆ. ಈಗಾಗಲೇ ಮೊದಲ ತ್ರೈಮಾಸಿಕದಲ್ಲಿ 1,078 ಹೊಸಬರನ್ನು ನೇಮಕ ಮಾಡಿಕೊಂಡಿದೆ.
ವಿಪ್ರೋ 2024ರಲ್ಲಿ ಬಾಕಿ ಉಳಿದಿರುವ ನೇಮಕವನ್ನು ಪೂರ್ಣಗೊಳಿಸಲು ಕಂಪನಿ ಬಯಸಿದೆ. ಟೆಕ್ ಮಹೀಂದ್ರಾ 6,000 ಉದ್ಯೋಗಿಗಳ ನೇಮಕಕ್ಕೆ ಉದ್ದೇಶಿಸಿದ್ದು, ಈಗಾಗಲೇ ಜೂನ್‌ನಲ್ಲಿ 1,000 ಫ್ರೆಷರ್ಸ್‌ನ್ನು ಕೆಲಸಕ್ಕೆ ತೆಗೆದುಕೊಂಡಿದೆ. ಈ ಎಲ್ಲ ಕಂಪನಿಗಳಿಂದ ಸೇರಿ ಒಟ್ಟಾರೆ ಈ ವರ್ಷ 88 ಸಾವಿರದಷ್ಟು ಎಂಜನಿಯರಿಂಗ್ ವಿದ್ಯಾರ್ಥಿಗಳು ಐಟಿ ಕಂಪನಿ ಸೇರಲಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿದೆ.