ಶ್ರೀಹರಿಕೋಟ: ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ)ದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹನವೆಂದೇ ಹೆಸರಾಗಿದ್ದ ಪಿಎಸ್‌ಎಲ್‌ವಿ (PSLV) ಸತತ ಎರಡನೇ ಬಾರಿಗೆ ಹಿನ್ನಡೆ ಅನುಭವಿಸಿದೆ. ಇಂದು ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಪಿಎಸ್‌ಎಲ್‌ವಿ-ಸಿ62 ಮಿಷನ್ ತಾಂತ್ರಿಕ ಕಾರಣಗಳಿಂದಾಗಿ ವಿಫಲವಾಗಿದ್ದು, ಡಿಆರ್‌ಡಿಒದ ಪ್ರಮುಖ ಉಪಗ್ರಹ ಸೇರಿದಂತೆ ಒಟ್ಟು 16 ಉಪಗ್ರಹಗಳು ಬಾಹ್ಯಾಕಾಶದಲ್ಲಿ ನಾಶವಾಗಿವೆ.
ಇಂದು ಬೆಳಗ್ಗೆ 10:17ಕ್ಕೆ 260 ಟನ್ ತೂಕದ ಪಿಎಸ್‌ಎಲ್‌ವಿ-ಡಿಎಲ್ ಮಾದರಿಯ ರಾಕೆಟ್ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿತ್ತು. ಮೊದಲ ಎರಡು ಹಂತಗಳಲ್ಲಿ ರಾಕೆಟ್‌ನ ಕಾರ್ಯಕ್ಷಮತೆ ಅತ್ಯಂತ ನಿಖರವಾಗಿತ್ತು. ಆದರೆ, ಮೂರನೇ ಹಂತದ ದಹನ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗೆ ತಾಂತ್ರಿಕ ಅಸಮತೋಲನ ಕಾಣಿಸಿಕೊಂಡಿತು. ನಿಯಂತ್ರಣ ಕೊಠಡಿಗೆ ಸಿಗುತ್ತಿದ್ದ ಸಂಕೇತಗಳು ಸ್ಥಗಿತಗೊಂಡವು. ರಾಕೆಟ್ ನಿಗದಿತ ಪಥದಿಂದ ದೂರ ಸರಿದಿದ್ದಲ್ಲದೆ, ಅದರ ತಿರುಗುವಿಕೆಯ ವೇಗದಲ್ಲಿ (Roll Rate) ವ್ಯತ್ಯಯ ಉಂಟಾಯಿತು. ಅಂತಿಮವಾಗಿ ಇಸ್ರೋ ಈ ಮಿಷನ್ ವಿಫಲವಾಗಿದೆ ಎಂದು ಅಧಿಕೃತವಾಗಿ ಘೋಷಿಸಿತು.

‘ಅನ್ವೇಷಾ’ ಸೇರಿದಂತೆ ಒಟ್ಟು 16 ಉಪಗ್ರಹಗಳ ನಷ್ಟ
ಈ ಮಿಷನ್‌ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ್ದ ‘ಇಒಎಸ್-ಎನ್1’ (ಅನ್ವೇಷಾ) ಎಂಬ ಅತ್ಯಾಧುನಿಕ ಸಮುದ್ರ ಕಣ್ಗಾವಲು ಉಪಗ್ರಹ ಪ್ರಮುಖವಾಗಿತ್ತು. ಇದರೊಂದಿಗೆ ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆ ‘ಧ್ರುವ ಸ್ಪೇಸ್’ ಅಭಿವೃದ್ಧಿಪಡಿಸಿದ್ದ 7 ಉಪಗ್ರಹಗಳು ಹಾಗೂ ಸ್ಪೇನ್ ದೇಶದ ‘ಕೆಸ್ಟ್ರೆಲ್ ಇನಿಶಿಯಲ್ ಡೆಮೋನ್ಸ್ಟ್ರೇಟರ್’ ಸೇರಿದಂತೆ ಒಟ್ಟು 16 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಗುರಿ ಹೊಂದಲಾಗಿತ್ತು. ಭಾರತದ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಇದು ಅತ್ಯಂತ ಮಹತ್ವದ ಯೋಜನೆಯಾಗಿತ್ತು, ಆದರೆ ಈ ವಿಫಲತೆಯಿಂದಾಗಿ ಖಾಸಗಿ ಸಂಸ್ಥೆಗಳಿಗೂ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಬಿದ್ದಿದೆ.
ಮಾಹಿತಿ ವಿಶ್ಲೇಷಣೆಯಲ್ಲಿ ವಿಜ್ಞಾನಿಗಳ ತಂಡ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು, “ಮೂರನೇ ಹಂತದ ಕಾರ್ಯಾಚರಣೆಯ ಅಂತ್ಯದಲ್ಲಿ ಪಥದ ಬದಲಾವಣೆ ಕಂಡುಬಂದಿದೆ. ನಾವು ಪ್ರಸ್ತುತ ಲಭ್ಯವಿರುವ ದತ್ತಾಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿದ್ದೇವೆ. ಶೀಘ್ರದಲ್ಲೇ ವೈಫಲ್ಯಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುವುದು,” ಎಂದು ತಿಳಿಸಿದ್ದಾರೆ. ಉಡಾವಣೆಯ ಎಂಟು ನಿಮಿಷಗಳ ನಂತರ ಉಂಟಾದ ಈ ಅವಘಡದ ತನಿಖೆಗಾಗಿ ಇಸ್ರೋ ಶೀಘ್ರದಲ್ಲೇ ‘ವೈಫಲ್ಯ ವಿಶ್ಲೇಷಣಾ ಸಮಿತಿ’ಯನ್ನು ರಚಿಸಲಿದೆ.
|
ಕಳೆದ ವರ್ಷ ನಡೆದ ಪಿಎಸ್‌ಎಲ್‌ವಿ-ಸಿ61 ಮಿಷನ್ ಕೂಡ ಇದೇ ಮಾದರಿಯಲ್ಲಿ ವಿಫಲವಾಗಿತ್ತು. ಕೇವಲ ಎಂಟು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ವೈಫಲ್ಯ ಇದಾಗಿದೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್‌ನಲ್ಲಿ AI ಯುವತಿ ಮೋಹಕ್ಕೆ ಮಾರು ಹೋದ ಯುವಕ | ಲಕ್ಷಾಂತರ ರೂ. ವಂಚನೆ!



















