ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ಪಿಎಸ್‌ಎಲ್‌ವಿ-ಸಿ61 ಉಡಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆ ಅನುಭವಿಸಿದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೋದ 101ನೇ ಉಪಗ್ರಹ ಇಒಎಸ್-09 ಅನ್ನು ಅದರ ಉದ್ದೇಶಿತ ಕಕ್ಷೆಗೆ ಸೇರಿಸುವಲ್ಲಿ ಪಿಎಸ್ಎಲ್‌ವಿ-ಸಿ61 ರಾಕೆಟ್ ವಿಫಲವಾಗಿದೆ. ಇದು ಪಿಎಸ್‌ಎಲ್‌ವಿ ಸರಣಿಯ 63ನೇ ಮತ್ತು ಎಕ್ಸ್‌ಎಲ್ ಕಾನ್ಫಿಗರೇಶನ್‌ನ 27ನೇ ಉಡಾವಣೆಯಾಗಿತ್ತು.
ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಲೈವ್ ಸ್ಟ್ರೀಮಿಂಗ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ರಾಕೆಟ್‌ನ ಮೂರನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಘನ ಇಂಧನವನ್ನು ಬಳಸುವ ಈ ಹಂತವು ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. “ಪಿಎಸ್‌ಎಲ್‌ವಿ-ಸಿ61 ಇಒಎಸ್-09 ಮಿಷನ್ ನಮ್ಮ 101ನೇ ಉಡಾವಣೆಯಾಗಿತ್ತು. ರಾಕೆಟ್‌ನ ಮೊದಲ ಎರಡು ಹಂತಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು. ಆದರೆ, ಮೂರನೇ ಹಂತದ ಮೋಟಾರ್ ಕಾರ್ಯಾಚರಣೆಯ ವೇಳೆ ಸಮಸ್ಯೆ ಉಂಟಾದ ಕಾರಣ ಮಿಷನ್ ಪೂರ್ಣಗೊಳ್ಳಲಿಲ್ಲ” ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹೈಡ್ರಾಕ್ಸಿಲ್-ಟರ್ಮಿನೇಟೆಡ್ ಪಾಲಿಬ್ಯುಟಾಡಿಯನ್ (ಎಚ್‌ಟಿಪಿಬಿ) ಇಂಧನವನ್ನು ಹೊಂದಿದ್ದ ಮೂರನೇ ಹಂತದ ಮೋಟಾರ್ ಉಡಾವಣೆಯ 203 ಸೆಕೆಂಡ್‌ಗಳಲ್ಲಿ ನಿರೀಕ್ಷಿತ ಕಾರ್ಯಕ್ಷಮತೆ ತೋರಲಿಲ್ಲ. ಇದರ ಪರಿಣಾಮವಾಗಿ ರಾಕೆಟ್ ತನ್ನ ಪಥದಿಂದ ವಿಚಲಿತಗೊಂಡು, 524 ಕಿಮೀ ಎತ್ತರದ ಕಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ. 2017 ರಿಂದ ಸತತ 58 ಯಶಸ್ವಿ ಉಡಾವಣೆಗಳನ್ನು ಕಂಡಿದ್ದ ಇಸ್ರೋಗೆ ಈ ವೈಫಲ್ಯವನ್ನು ಹಿನ್ನಡೆ ಉಂಟುಮಾಡಿದೆ.

ಪಿಎಸ್‌ಎಲ್‌ವಿ ಮಿಷನ್‌ಗಳಲ್ಲಿ ವಿಫಲತೆಗಳು ವಿರಳವಾಗಿದ್ದು, ಈ ಹಿಂದಿನ ಕೆಲ ಘಟನೆಗಳು ಹಂತಗಳ ಬೇರ್ಪಡಿಕೆ ಅಥವಾ ಚಾಲನೆಯ ಸಮಸ್ಯೆಗಳಿಂದ ಉಂಟಾಗಿವೆ. ಪಿಎಸ್‌ಎಲ್‌ವಿ-ಸಿ61 ರ ವೈಫಲ್ಯಕ್ಕೆ ಚಾಲನೆಯ ದೋಷ, ಹಂತಗಳ ಬೇರ್ಪಡಿಕೆಯಲ್ಲಿನ ತೊಂದರೆ ಅಥವಾ ಮಾರ್ಗದರ್ಶನ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿನ ದೋಷಗಳು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಕೂಲಂಕಷವಾಗಿ ಪರಿಶೀಲಿಸಲು ವಿಶ್ಲೇಷಣಾ ಸಮಿತಿಯನ್ನು ಇಸ್ರೋ ರಚಿಸಿದೆ. ಸಮಿತಿಯು ನಿಖರವಾದ ಕಾರಣವನ್ನು ಪತ್ತೆಹಚ್ಚಿ, ಮುಂದಿನ ಕ್ರಮಗಳನ್ನು ಶಿಫಾರಸು ಮಾಡಲಿದೆ. ಈ ಹಿನ್ನಡೆಯಿಂದಾಗಿ ಭಾರತದ 52 ಉಪಗ್ರಹಗಳ ಕಣ್ಗಾವಲು ಕಾರ್ಯಕ್ರಮಕ್ಕೆ ತಾತ್ಕಾಲಿಕ ಅಡ್ಡಿಯುಂಟಾಗಿದ್ದರೂ, ಇಸ್ರೋ 2025 ರಲ್ಲಿ ಇನ್ನೂ ನಾಲ್ಕು ಪಿಎಸ್‌ಎಲ್‌ವಿ ಉಡಾವಣೆಗಳನ್ನು ಯೋಜಿಸಿದೆ.
ಇಒಎಸ್-09 ಉಪಗ್ರಹವು 1,696 ಕೆಜಿ ತೂಕವಿದ್ದು, ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ತಂತ್ರಜ್ಞಾನವನ್ನು ಹೊಂದಿತ್ತು. ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ಭೂಮಿಯ ಉನ್ನತ-ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿತ್ತು. ಕೃಷಿ, ಅರಣ್ಯ, ವಿಪತ್ತು ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆಯಂತಹ ಕ್ಷೇತ್ರಗಳಿಗೆ ನಿರಂತರ ಮಾಹಿತಿ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಬಾಹ್ಯಾಕಾಶ ವಿಜ್ಞಾನಿ ಪಿಕೆ ಘೋಷ್ ಈ ವಿಫಲತೆಯನ್ನು ಗಂಭೀರ ಹಿನ್ನಡೆಯೆಂದು ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇತರ ಬಾಹ್ಯಾಕಾಶ ಸಂಸ್ಥೆಗಳಿಗೆ ಹೋಲಿಸಿದರೆ ಇಸ್ರೋ ಕಡಿಮೆ ವೈಫಲ್ಯಗಳನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ. ಇಸ್ರೋ ತನ್ನ ಗಗನಯಾನ, ಚಂದ್ರಯಾನ-5 ಮತ್ತು ಮಂಗಳಯಾನದಂತಹ ಭವಿಷ್ಯದ ಯೋಜನೆಗಳಿಗೆ ಸಿದ್ಧತೆ ನಡೆಸುತ್ತಿದ್ದು, ಈ ತಾತ್ಕಾಲಿಕ ಹಿನ್ನಡೆಯಿಂದ ವಿಚಲಿತಗೊಳ್ಳುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.



















