ವಾಷಿಂಗ್ಟನ್ : ಇರಾನ್-ಇಸ್ರೇಲ್ ಸಂಘರ್ಷ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ತಲುಪಿದೆ. ಇರಾನ್‌ನ ತೈಲ ಶೇಖರಣಾ ಘಟಕಗಳ ಮೇಲೆ ಇಸ್ರೇಲ್ ನಡೆಸಿದ ವಿನಾಶಕಾರಿ ವೈಮಾನಿಕ ದಾಳಿಯು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವುದು ಮಾತ್ರವಲ್ಲದೆ, ಇಸ್ರೇಲ್‌ನ ಮಿತ್ರ ರಾಷ್ಟ್ರವಾದ ಅಮೆರಿಕದ ಕೆಂಗಣ್ಣಿಗೂ ಗುರಿಯಾಗಿದೆ. ಕಳೆದ ಫೆ.28 ರಂದು ಯುದ್ಧ ಆರಂಭವಾದ ನಂತರ ವಾಷಿಂಗ್ಟನ್ ಮತ್ತು ಟೆಲ್ ಅವಿವ್ ನಡುವೆ ಉಂಟಾಗಿರುವ ಮೊದಲ ದೊಡ್ಡ ರಾಜತಾಂತ್ರಿಕ ಬಿರುಕು ಇದು ಎಂದು ವಿಶ್ಲೇಷಿಸಲಾಗುತ್ತಿದೆ.
ಇಸ್ರೇಲ್ ನಡೆಗೆ ಅಮೆರಿಕ ಅಸಮಾಧಾನ
ಇರಾನ್ ರಾಜಧಾನಿ ಟೆಹ್ರಾನ್ ಸುತ್ತಮುತ್ತಲಿನ ತೈಲ ಡಿಪೋಗಳು ಮತ್ತು ಸಂಸ್ಕರಣಾಗಾರಗಳ ಮೇಲೆ ಇಸ್ರೇಲ್ ಸೇನೆ ಶನಿವಾರ ರಾತ್ರಿ ಭೀಕರ ದಾಳಿ ನಡೆಸಿದೆ. ಈ ದಾಳಿಯ ಬಗ್ಗೆ ಇಸ್ರೇಲ್ ಮುಂಚಿತವಾಗಿ ಅಮೆರಿಕಕ್ಕೆ ಮಾಹಿತಿ ನೀಡಿತ್ತಾದರೂ, ಅದರ ವ್ಯಾಪ್ತಿ ಮತ್ತು ತೀವ್ರತೆಯು ಅಮೆರಿಕದ ನಿರೀಕ್ಷೆಯನ್ನು ಮೀರಿತ್ತು ಎಂದು ವರದಿಯಾಗಿದೆ. ಈ ದಾಳಿಯು ಅಮೆರಿಕದ ಮಿಲಿಟರಿ ಅಧಿಕಾರಿಗಳನ್ನು ದಂಗುಬಡಿಸಿದ್ದು, ಶ್ವೇತಭವನವು ಇಸ್ರೇಲ್‌ಗೆ ಅತ್ಯಂತ ಖಾರವಾದ ಪದಗಳಲ್ಲಿ ‘WTF’ (ನೀವು ಏನು ಮಾಡುತ್ತಿದ್ದೀರಿ?) ಎಂಬ ಸಂದೇಶ ರವಾನಿಸಿದೆ ಎಂದು ‘ಆಕ್ಸಿಯೋಸ್’ ವರದಿ ಮಾಡಿದೆ. “ಇಸ್ರೇಲ್ ನಡೆಸಿದ ಈ ದಾಳಿಯು ನಮಗೆ ಸಮ್ಮತವಿಲ್ಲ, ಇದು ಸರಿಯಾದ ಕ್ರಮವಲ್ಲ” ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಟೆಹ್ರಾನ್‌ನಲ್ಲಿ ‘ಬೆಂಕಿಯ ನದಿ’
ಇಸ್ರೇಲ್ ದಾಳಿಯ ಪರಿಣಾಮ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಪ್ರಳಯ ಸದೃಶ ದೃಶ್ಯಗಳು ಕಂಡುಬಂದಿವೆ. ತೈಲ ಡಿಪೋಗಳಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ, ತೈಲ ಸೋರಿಕೆಯಾಗಿ ಬೀದಿಗಳಲ್ಲಿ ಹರಿದಿದ್ದು, ಅಲ್ಲಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಸಿಗದೆ ಬೀದಿಗಳಲ್ಲಿ ‘ಬೆಂಕಿಯ ನದಿ’ಯಂತೆ ಹರಿಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ಗಗನಕ್ಕೇರಿರುವ ಕಪ್ಪು ಹೊಗೆಯ ಮೋಡಗಳಿಂದಾಗಿ ನಗರದಲ್ಲಿ ಕಪ್ಪು ಬಣ್ಣದ ವಿಷಕಾರಿ ಮಳೆ ಸುರಿಯುತ್ತಿದ್ದು, ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಈ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪರಿಸರಕ್ಕೆ ಅಪಾರ ಹಾನಿಯುಂಟಾಗಿದೆ ಎಂದು ವರದಿಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಜಿಗಿತ
ಇಸ್ರೇಲ್‌ನ ಈ ಒಂದು ನಡೆ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಸೋಮವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ನ ಗಡಿಯನ್ನು ದಾಟಿದೆ. ಅಂತಾರಾಷ್ಟ್ರೀಯ ಮಾನದಂಡದ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.16.5ರಷ್ಟು ಏರಿಕೆಯಾಗಿ 107.97 ಡಾಲರ್‌ಗೆ ತಲುಪಿದೆ. ಇತ್ತ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಬೆಲೆಯೂ 106.22 ಡಾಲರ್‌ಗೆ ಏರಿಕೆಯಾಗಿದ್ದು, ಇಂಧನ ದರ ಏರಿಕೆಯು ವಿಶ್ವದ ರಾಷ್ಟ್ರಗಳನ್ನು ಸಂಕಷ್ಟಕ್ಕೆ ದೂಡುವ ಲಕ್ಷಣಗಳು ಗೋಚರಿಸುತ್ತಿವೆ.
ಇರಾನ್ ಎಚ್ಚರಿಕೆ
ಇಸ್ರೇಲ್‌ನ ಈ ದಾಳಿಯು ತೀವ್ರ ಸ್ವರೂಪದ ತಿರುಗೇಟಿಗೆ ಕಾರಣವಾಗಬಹುದು ಎಂದು ಇರಾನ್ ಎಚ್ಚರಿಸಿದೆ. “ಒಂದು ವೇಳೆ ನಮ್ಮ ಇಂಧನ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ಮತ್ತೆ ದಾಳಿ ಮಾಡಿದರೆ, ನಾವು ಅಷ್ಟೇ ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ. ಇದರಿಂದ ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್ ತಲುಪಿದರೂ ಆಶ್ಚರ್ಯವಿಲ್ಲ” ಎಂದು ಇರಾನ್ ಸೇನಾ ವಕ್ತಾರರು ಗುಡುಗಿದ್ದಾರೆ. ಅತ್ತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ತೈಲ ಬೆಲೆ ಏರಿಕೆಯಿಂದ ಅಮೆರಿಕದ ನಾಗರಿಕರ ಮೇಲಾಗುವ ಆರ್ಥಿಕ ಹೊರೆಯ ಬಗ್ಗೆ ಚಿಂತಿತವಾಗಿದ್ದು, ಇಸ್ರೇಲ್‌ನ ಈ ಆಕ್ರಮಣಕಾರಿ ಧೋರಣೆಯನ್ನು ನಿಯಂತ್ರಿಸಲು ಮುಂದಾಗಿದೆ.
ಇದನ್ನೂ ಓದಿ | ಕಡತದಲ್ಲೇ ಉಳಿದ ದೂರು ಅರ್ಜಿ..ಪೂಜೆ ಮಾಡಿ ಎಂದು ಗಂಧದ ಕಡ್ಡಿ ರವಾನೆ



















