ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಮೊದಲೇ ಕಾಯ್ದಿರಿಸಿದ ಗಾಲಿಕುರ್ಚಿಯನ್ನು ಏರ್ ಇಂಡಿಯಾ(Air India) ಸಿಬ್ಬಂದಿ ಒದಗಿಸದೇ ಇದ್ದ ಕಾರಣ, ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದ 82 ವರ್ಷದ ವೃದ್ಧೆಯೊಬ್ಬರು ಬಿದ್ದು ಗಾಯಗೊಂಡು, ಆಸ್ಪತ್ರೆಯ ಐಸಿಯುಗೆ ದಾಖಲಾದ ಘಟನೆ ನಡೆದಿದೆ.
ವೃದ್ಧೆಯ ಮೊಮ್ಮಗಳು ಪಾರುಲ್ ಕನ್ವರ್ ಎಂಬವರು ಈ ವಿಚಾರವನ್ನು ಟ್ವೀಟ್ ಮಾಡಿದ್ದು, ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. “ನನಗೆ ಬೇರೆ ಆಯ್ಕೆ ಇಲ್ಲದ ಕಾರಣ, ನಾನು ಇದನ್ನು ಪೋಸ್ಟ್ ಮಾಡಬೇಕಾಯಿತು. ಮನುಷ್ಯನ ಜೀವಕ್ಕೆ ಮತ್ತು ಯೋಗಕ್ಷೇಮಕ್ಕೆ ಬೆಲೆಯೇ ಇಲ್ಲವೇ? ಏರ್ ಇಂಡಿಯಾ, ನೀವು ನನ್ನ ಅಜ್ಜಿಯನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದೀರಿ. ನಿಮ್ಮ ವರ್ತನೆ ನನಗೆ ಆಘಾತವುಂಟುಮಾಡಿದೆ” ಎಂದು ಪಾರುಲ್ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಅಜ್ಜಿಯು ಹಲವಾರು ಯುದ್ಧಗಳಲ್ಲಿ ಪಾಲ್ಗೊಂಡ ದಿವಂಗತ ಲೆಫ್ಟಿನೆಂಟ್ ಜನರಲ್ ಅವರ ಪತ್ನಿ. ಅವರು ಮಾರ್ಚ್ 4 ರಂದು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಲು ಗಾಲಿಕುರ್ಚಿ ಬುಕ್ ಮಾಡಿದ್ದರು. ಆದಾಗ್ಯೂ, ವಿಮಾನ ನಿಲ್ದಾಣವನ್ನು ತಲುಪಿದ ನಂತರ, ಏರ್ ಇಂಡಿಯಾ ಸಿಬ್ಬಂದಿ, ವಿಮಾನ ನಿಲ್ದಾಣದ ಸಹಾಯ ಕೇಂದ್ರ ಮತ್ತು ಇಂಡಿಗೊ ಸಿಬ್ಬಂದಿಗೆ ಪದೇ ಪದೇ ವಿನಂತಿಸಿದರೂ ಯಾರೂ ಅವರಿಗೆ ಗಾಲಿಕುರ್ಚಿಯನ್ನು ಒದಗಿಸಲಿಲ್ಲ.
ನಾವು ಸುಮಾರು ಒಂದು ಗಂಟೆ ಪ್ರಯತ್ನಿಸಿದೆವು. ವಿಮಾನಯಾನ ಸಿಬ್ಬಂದಿ, ವಿಮಾನ ನಿಲ್ದಾಣದ ಸಹಾಯ ಡೆಸ್ಕ್, ಬೇರೆ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಸಿಬ್ಬಂದಿಗೂ ಮನವಿ ಮಾಡಿದೆವು (ಆದರೆ, ಅವರು ತಮ್ಮ ಬಳಿ ಉಚಿತ ಗಾಲಿಕುರ್ಚಿ ಇದ್ದರೂ ನಾವು ಅದನ್ನು ಹಂಚಿಕೊಳ್ಳುವುದಿಲ್ಲ ಎಂದರು). ಬೇರೆ ದಾರಿಯಿಲ್ಲದೆ, ನನ್ನ ಅಜ್ಜಿ ಟರ್ಮಿನಲ್ 3 ರಲ್ಲಿ ಮೂರು ಪಾರ್ಕಿಂಗ್ ಪಥಗಳನ್ನು ದಾಟಿ ನಡೆದುಕೊಂಡೇ ಹೋಗಲು ಪ್ರಯತ್ನಿಸಿದರು.
ನಡೆಯಲು ಹೆಣಗಾಡುತ್ತಿದ್ದರೂ, ಯಾರೂ ನೆರವಿನ ಹಸ್ತ ಚಾಚಲಿಲ್ಲ. ಅಂತಿಮವಾಗಿ, ಅಜ್ಜಿ ಸೋತುಹೋದರು, ಕಾಲುಗಳು ಬಲ ಕಳೆದುಕೊಂಡು, ಏರ್ ಇಂಡಿಯಾದ ಪ್ರೀಮಿಯಂ ಎಕಾನಮಿ ಕೌಂಟರ್ ಬಳಿಯೇ ಕುಸಿದುಬಿದ್ದರು. ಇಂತಹ ಸಂದರ್ಭದಲ್ಲಿ ಕುಟುಂಬವೇ ಸ್ವತಃ ವೈದ್ಯಕೀಯ ಸಹಾಯವನ್ನು ವ್ಯವಸ್ಥೆ ಮಾಡಬೇಕು ಎಂಬ ಕಾರಣಕ್ಕೆ ಆಗಲೂ ಯಾವುದೇ ಸಿಬ್ಬಂದಿ ಸಹಾಯಕ್ಕೆ ಮುಂದಾಗಲಿಲ್ಲ” ಎಂದು ಪಾರುಲ್ ಆರೋಪಿಸಿದ್ದಾರೆ.
ಅಂತಿಮವಾಗಿ ಗಾಲಿಕುರ್ಚಿ ಬಂದಾಗ, ಗೋಚರಿಸುವ ಗಾಯಗಳ ಹೊರತಾಗಿಯೂ ಸರಿಯಾದ ವೈದ್ಯಕೀಯ ತಪಾಸಣೆಯಿಲ್ಲದೆ ವಿಮಾನಯಾನ ಸಂಸ್ಥೆ ಅವರನ್ನು ಹತ್ತಿಸಿಕೊಂಡಿತು. ಅವರ ತುಟಿಯಲ್ಲಿ ರಕ್ತಸ್ರಾವ ಆಗುತ್ತಿತ್ತು. ತಲೆ ಮತ್ತು ಮೂಗಿಗೆ ಗಾಯಗಳಾಗಿದ್ದವು. ವಿಮಾನ ಸಿಬ್ಬಂದಿ ಐಸ್ ಪ್ಯಾಕ್ ಇಟ್ಟು ಸಹಾಯ ಮಾಡಿದರು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಅಲ್ಲಿ ವೈದ್ಯರು ತಪಾಸಣೆ ಮಾಡಿ, 2 ಹೊಲಿಗೆಗಳನ್ನು ಹಾಕಿದರು” ಎಂದು ಪಾರುಲ್ ಹೇಳಿದ್ದಾರೆ. ಮೆದುಳಿನ ರಕ್ತಸ್ರಾವ ಆಗಿರುವ ಸಾಧ್ಯತೆ ಇರುವ ಕಾರಣ ಈಗ ಅಜ್ಜಿಯನ್ನು ಐಸಿಯುಗೆ ದಾಖಲಿಸಬೇಕಾಯಿತು ಎಂದಿದ್ದಾರೆ. ಜೊತೆಗೆ, “ನಾವು ಈ ಬಗ್ಗೆ ಡಿಜಿಸಿಎ ಮತ್ತು ಏರ್ ಇಂಡಿಯಾಗೆ ದೂರು ನೀಡಿದ್ದೇವೆ. ಏನು ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕು” ಎಂದೂ ಅವರು ಹೇಳಿದ್ದಾರೆ.