ಗಾಜಾ: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಮಧ್ಯೆ ಕದನವಿರಾಮ ಘೋಷಣೆ ಮಾಡಿದರೂ ಇಸ್ರೇಲ್ ಮಾತ್ರ ಗಾಜಾ ಪಟ್ಟಿ ಮೇಲೆ ದಾಳಿ (Israel Gaza War) ನಿಲ್ಲಿಸುತ್ತಿಲ್ಲ. ಮಂಗಳವಾರ ಬೆಳಗ್ಗೆ ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದ್ದು, ಸುಮಾರು 200 ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್ ತಿಳಿಸಿದೆ. ಇದರೊಂದಿಗೆ ಕದನವಿರಾಮದ ಬಳಿಕ ನಿಟ್ಟುಸಿರು ಬಿಟ್ಟಿದ್ದ ಗಾಜಾ ಪಟ್ಟಿಯು ಮತ್ತೆ ರಕ್ತಪಾತ ಕಂಡಂತಾಗಿದೆ.
ರಂಜಾನ್ ಪವಿತ್ರ ಮಾಸದ ವೇಳೆಯೇ ಗಾಜಾ ಸಿಟಿ, ದೇರ್ ಅಲ್ ಬಲಾಹ್, ಖಾನ್ ಯೂನಿಸ್ ಹಾಗೂ ರಫಾಹ್ ಸೆಂಟ್ರಲ್ ಪ್ರದೇಶಗಳ ಮೇಲೆ ಇಸ್ರೇಲ್ ಬೆಳಗ್ಗೆ ಬೆಳಗ್ಗೆಯೇ ರಾಕೆಟ್ ಗಳ ದಾಳಿ ನಡೆಸಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ನೂರಾರು ಜನ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಮಾಹಿತಿ ನೀಡಿದೆ.
ದಾಳಿಗೂ ಮೊದಲು ಇಸ್ರೇಲ್ ಭದ್ರತಾ ಪಡೆಗಳು (ಐಡಿಎಫ್) ದಾಳಿಯ ಕುರಿತು ಮಾಹಿತಿ ನೀಡಿವೆ. “ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರ ನೆಲೆಗಳಮೇಲೆ ದಾಳಿ ಮಾಡಲಾಗುತ್ತಿದೆ” ಎಂದು ಘೋಷಿಸಿಯೇ ಭೀಕರ ವಾಯುದಾಳಿ ನಡೆಸಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಮಧ್ಯೆ ಜನವರಿ 19ರಂದು ಕದನವಿರಾಮ ಘೋಷಣೆ ಮಾಡಲಾಗಿತ್ತು. ಅಮೆರಿಕದ ಮಧ್ಯಸ್ಥಿಕೆಯಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಒಪ್ಪಂದದ ನಿಯಮಗಳನ್ನು ಗಾಳಿಗೆ ತೂರಿರುವ ಇಸ್ರೇಲ್, ಭೀಕರ ದಾಳಿ ನಡೆಸಿದೆ.
ದಾಳಿಯ ಬಗ್ಗೆ ಇಸ್ರೇಲ್ ಸ್ಪಷ್ಟನೆಯನ್ನೂ ನೀಡಿದೆ. “ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಪದೇಪದೆ ಹಮಾಸ್ ಉಗ್ರರಿಗೆ ಮನವಿ ಮಾಡಿದರೂ ಅವರು ತಿರಸ್ಕರಿಸುತ್ತಿದ್ದಾರೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ನೀಡಿದ ಪ್ರಸ್ತಾಪಗಳನ್ನೂ ಹಮಾಸ್ ಉಗ್ರರು ತಿರಸ್ಕರಿಸುತ್ತಿದ್ದಾರೆ. ಹಾಗಾಗಿ, ದಾಳಿ ಅನಿವಾರ್ಯವಾಗಿದೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಆದಾಗ್ಯೂ, ದಾಳಿಗೂ ಮೊದಲು ಇಸ್ರೇಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.