ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾ ಯುದ್ಧದ ನಡುವೆ ಏರ್ಪಟ್ಟಿರುವ ತಾತ್ಕಾಲಿಕ ಕದನ ವಿರಾಮದ ಬೆನ್ನಲ್ಲೇ ಇದೀಗ ಇಡೀ ಪ್ರಪಂಚದ ಕಣ್ಣು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನತ್ತ ನೆಟ್ಟಿದೆ. ಏ.11ರ ಶನಿವಾರದಿಂದ ನಡೆಯಲಿರುವ ಅಮೆರಿಕ ಮತ್ತು ಇರಾನ್ ನಡುವಿನ ನಿರ್ಣಾಯಕ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ಸಾಕ್ಷಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಇಡೀ ನಗರವನ್ನು ಅಕ್ಷರಶಃ ಭದ್ರಕೋಟೆಯನ್ನಾಗಿ ಪರಿವರ್ತಿಸಲಾಗಿದೆ. ಪ್ರಮುಖ ರಸ್ತೆಗಳು ಮತ್ತು ಸರ್ಕಾರಿ ಕಚೇರಿಗಳ ಸುತ್ತಮುತ್ತ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ.
ಕಳೆದ ಫೆ.28 ರಂದು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದ ರಾಜತಾಂತ್ರಿಕ ಮಧ್ಯಸ್ಥಿಕೆಯ ಫಲವಾಗಿ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಮತ್ತಷ್ಟು ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಮಾತುಕತೆಯ ಮೇಜಿಗೆ ಬರಲು ಸಮ್ಮತಿಸಿದ್ದು, ಈ ಸೂಕ್ಷ್ಮ ಹಾಗೂ ಐತಿಹಾಸಿಕ ಮಾತುಕತೆಗೆ ಪಾಕಿಸ್ತಾನ ವೇದಿಕೆ ಕಲ್ಪಿಸಿದೆ.
ರೆಡ್ ಝೋನ್ ನಿರ್ಬಂಧ, ಶಾಲಾ-ಕಾಲೇಜುಗಳಿಗೆ ರಜೆ
ಸಂಸತ್ತು, ಪ್ರಮುಖ ಸರ್ಕಾರಿ ಕಚೇರಿಗಳು, ರಾಯಭಾರಿ ಕಚೇರಿಗಳು ಹಾಗೂ ಐಷಾರಾಮಿ ಹೋಟೆಲ್‌ಗಳನ್ನು ಒಳಗೊಂಡಿರುವ ಇಸ್ಲಾಮಾಬಾದ್‌ನ ‘ರೆಡ್ ಝೋನ್’ ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ನಗರದಾದ್ಯಂತ ಸಶಸ್ತ್ರ ಪೊಲೀಸ್ ಪಡೆಗಳು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿವೆ. ಗಣ್ಯರ ಸುಗಮ ಸಂಚಾರಕ್ಕಾಗಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಗುರುವಾರ ಮತ್ತು ಶುಕ್ರವಾರ ನಗರದಲ್ಲಿ ಶಾಲಾ-ಕಾಲೇಜು ಹಾಗೂ ಮಾರುಕಟ್ಟೆಗಳನ್ನು ಬಂದ್ ಮಾಡಿ ಸರ್ಕಾರಿ ರಜೆ ಘೋಷಿಸಲಾಗಿದೆ. ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಅಮೆರಿಕದ ರಾಯಭಾರಿಗೆ ದೋಷರಹಿತ ಭದ್ರತೆಯ ಭರವಸೆ ನೀಡಿದ್ದಾರೆ. ಭದ್ರತಾ ಪರಿಶೀಲನೆಗಾಗಿಯೇ 30 ಸದಸ್ಯರ ಅಮೆರಿಕದ ತಂಡ ಇಸ್ಲಾಮಾಬಾದ್‌ಗೆ ಆಗಮಿಸಿದೆ. ಆದಾಗ್ಯೂ, ಪಾಕಿಸ್ತಾನ ಸರ್ಕಾರವು ಭದ್ರತೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿಲ್ಲದ ಕಾರಣ ಅಮೆರಿಕದ ನಿಯೋಗಕ್ಕೆ ಅಪಾಯವಿದೆ ಎಂದು ಶ್ವೇತಭವನದ ಮಾಜಿ ಪತ್ರಿಕಾ ಕಾರ್ಯದರ್ಶಿ ಅರಿ ಫ್ಲೈಷರ್ ಆತಂಕ ವ್ಯಕ್ತಪಡಿಸಿದ್ದಾರೆ. ಹೈ-ಪ್ರೊಫೈಲ್ ರಾಜತಾಂತ್ರಿಕ ಸಭೆಗಳಿಗೆ ಹೆಸರಾದ ಪಂಚತಾರಾ ‘ಹೋಟೆಲ್ ಸೆರೆನಾ’ದಲ್ಲಿ ಈ ಮಾತುಕತೆ ನಡೆಯುವ ನಿರೀಕ್ಷೆಯಿದೆ.
ವಾಯುಮಾರ್ಗದಲ್ಲೂ ಅಭೇದ್ಯ ಭದ್ರತೆ
ಭೂಮಿಯ ಮೇಲಷ್ಟೇ ಅಲ್ಲದೆ, ವಾಯುಮಾರ್ಗದಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆಗಮಿಸುತ್ತಿರುವ ನಿಯೋಗಗಳಿಗೆ ಸುರಕ್ಷತೆ ಒದಗಿಸಲು ಪಾಕಿಸ್ತಾನಿ ವಾಯುಪಡೆಯು (PAF) ಐಎಲ್-78 ಇಂಧನ ತುಂಬುವ ಟ್ಯಾಂಕರ್‌ಗಳು ಹಾಗೂ ಸಿ-130 ವಿಮಾನಗಳನ್ನು ನಿಯೋಜಿಸಿದೆ. ಇರಾನ್ ನಿಯೋಗವು ಬಂಡರ್ ಅಬ್ಬಾಸ್‌ನಿಂದ ಪ್ರಯಾಣಿಸುವಾಗ ಇಸ್ರೇಲ್‌ನ ಯಾವುದೇ ಸಂಭವನೀಯ ದಾಳಿಯನ್ನು ತಡೆಯಲು, ಪಾಕಿಸ್ತಾನಿ ಯುದ್ಧವಿಮಾನಗಳು ಬೆಂಗಾವಲಾಗಿ ಸಾಗಲಿವೆ ಮತ್ತು ರಕ್ಷಣಾತ್ಮಕ ಗುರಾಣಿಯಾಗಿ ‘ಅವಾಕ್ಸ್’ (AWACS) ವ್ಯವಸ್ಥೆಯನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ರಕ್ಷಣಾ ವಿಶ್ಲೇಷಕರು ತಿಳಿಸಿದ್ದಾರೆ.
ವೀಸಾ ಆನ್ ಅರೈವಲ್ ಸೌಲಭ್ಯ
ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಪತ್ರಕರ್ತರು ಸೇರಿದಂತೆ ಎಲ್ಲಾ ಪ್ರತಿನಿಧಿಗಳಿಗೂ ‘ವೀಸಾ ಆನ್ ಅರೈವಲ್’ (ಆಗಮಿಸಿದ ಕೂಡಲೇ ವೀಸಾ) ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಪಾಕಿಸ್ತಾನದ ಗೃಹ ಮತ್ತು ಮಾದಕವಸ್ತು ನಿಯಂತ್ರಣ ಸಚಿವಾಲಯವು ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣಗಳಲ್ಲಿ ವಿಶೇಷ ಸಹಾಯವಾಣಿ ಕೇಂದ್ರಗಳನ್ನು ಸಹ ತೆರೆಯಲಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಸುಗಮವಾಗಿ ನಡೆಯಲು ಪ್ರವೇಶ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ ಎಂದು ವಿದೇಶಾಂಗ ಸಚಿವ ಇಶಾಕ್ ದಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ರೋಚಕ ಪಂದ್ಯದಲ್ಲಿ ಡೆಲ್ಲಿಗೆ 1 ರನ್ ಸೋಲು.. ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಅಕ್ಷರ್ ಪಟೇಲ್ ಉತ್ತರವೇನು?



















