ವಾಷಿಂಗ್ಟನ್: ಅಮೆರಿಕದ ಜೈಲುಗಳಲ್ಲಿ ಇಸ್ಲಾಂ ಧರ್ಮ ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೊಸ ವರದಿ ತಿಳಿಸಿದೆ. ಪ್ರತಿ ವರ್ಷ ಹತ್ತಾರು ಸಾವಿರ ಕೈದಿಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ ಎಂದು ಸಿಬಿಎಸ್ ನ್ಯೂಸ್ ಫೆಬ್ರವರಿ 28ರಂದು ತನ್ನ ವರದಿಯಲ್ಲಿ ತಿಳಿಸಿದೆ.
“ದಿ ಸ್ಟೇಟ್ ಆಫ್ ಸ್ಪಿರಿಚುವಾಲಿಟಿ ವಿತ್ ಲಿಸಾ ಲಿಂಗ್” ಎಂಬ ಸಿಬಿಎಸ್ ನ್ಯೂಸ್ ಸೀರೀಸ್‌ನಲ್ಲಿ ಅಮೆರಿಕದ ಜೈಲಿನ ಕೈದಿಗಳು ಇಸ್ಲಾಂ ಧರ್ಮ ಸ್ವೀಕರಿಸುವ ಹಿನ್ನೆಲೆ ಕುರಿತು ಸಂಶೋಧನೆ ನಡೆಸಲಾಗಿದೆ.
ಧರ್ಮದೊಳಗಿನ ಆಧ್ಯಾತ್ಮಿಕ ಸ್ವಾತಂತ್ರ್ಯ
ತೈಬಾ ಫೌಂಡೇಶನ್ ಎಂಬ ಸಂಸ್ಥೆ ಅಮೆರಿಕದ ಕೈದಿಗಳಿಗೆ ದೂರ ಶಿಕ್ಷಣದ ಮೂಲಕ ಇಸ್ಲಾಮಿಕ್ ಅಧ್ಯಯನ ಕಲಿಯಲು ಅವಕಾಶ ನೀಡುತ್ತಿದೆ. ಈ ಸಂಸ್ಥೆಯ ಸ್ಥಾಪಕ ನಿರ್ದೇಶಕ ರಾಮಿ ನಸೂರ್ ಅವರ ಪ್ರಕಾರ, ಪ್ರತಿ ದಿನ ಅನೇಕ ಕೈದಿಗಳು ಇಸ್ಲಾಂ ಅಭ್ಯಾಸ ಮಾಡಲು ಮಾರ್ಗದರ್ಶನ ನೀಡುವಂತೆ ಕೋರಿದ್ದಾರೆ.
“ನಾವು ಸುಮಾರು 15 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಪ್ರಾರಂಭಿಸಿದಾಗ, ಜೈಲಿನಲ್ಲಿರುವ ಮುಸ್ಲಿಂ ಕೈದಿಗಳು ಧಾರ್ಮಿಕ ಶಿಕ್ಷಣ ಪಡೆಯಲು ಅವಕಾಶ ಬೇಕೆಂದು ನಮ್ಮನ್ನು ಕೇಳುತ್ತಿದ್ದರು” ಎಂದು ನಸೂರ್ ಹೇಳಿದರು.
“ಆ ಅವಶ್ಯಕತೆಯನ್ನು ಪೂರೈಸಲು ನಾವು ಈ ಸಂಸ್ಥೆಯನ್ನು ಸ್ಥಾಪಿಸಿದೆವು. ಆದರೆ, ಈಗ ಎಲ್ಲರೂ ಕೇಳುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ. ತೈಬಾ ಫೌಂಡೇಶನ್ ಈಗಾಗಲೇ 13,000ಕ್ಕೂ ಹೆಚ್ಚು ಕೈದಿಗಳಿಗೆ ಶಿಕ್ಷಣ ನೀಡಿದೆ ಮತ್ತು ಅವರಲ್ಲಿ ಸುಮಾರು 90% ಮಂದಿ ಜೈಲಿನಲ್ಲಿಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ನಸೂರ್ ಹೇಳಿದ್ದಾರೆ.
ಜೈಲುಗಳಲ್ಲಿ ಇಸ್ಲಾಂ ಬೆಳೆಯಲು ಕಾರಣವೇನು?
ನಸೂರ್ ಪ್ರಕಾರ, ಅಮೆರಿಕದ ಜೈಲುಗಳಲ್ಲಿ ಶಾರೀರಿಕ ಮತ್ತು ಮಾನಸಿಕ ಕ್ಷೋಭೆಯಿಂದ ಬಳಲುವ ಕೈದಿಗಳು, ಇಸ್ಲಾಂನಲ್ಲಿಯೇ ಆಧ್ಯಾತ್ಮಿಕ ಮುಕ್ತಿಯನ್ನು ಕಂಡುಕೊಳ್ಳುತ್ತಾರೆ.
“ಇಸ್ಲಾಂನಲ್ಲಿ ನಿಯಮಿತ ಶಿಸ್ತು ಇದೆ. ದೈನಂದಿನ ಐದು ಪ್ರಾರ್ಥನೆಗಳು, ನಿರ್ದಿಷ್ಟ ಧಾರ್ಮಿಕ ವಿಧಾನಗಳು ಇವೆ. ಇದು ಜೀವನದಲ್ಲಿ ಶಿಸ್ತು ಮೂಡಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.
“ಇಸ್ಲಾಂ ಕೈದಿಗಳಿಗೆ ಒಂದು ನಂಬಿಕೆಯನ್ನು ಜೀವನ ಒದಗಿಸುತ್ತದೆ. ಈ ಮೂಲಕ ಜೈಲುಗಳ ಗೋಡೆಗಳು ಅವರನ್ನು ಬಂಧಿಸುವುದಿಲ್ಲ” ಎಂದು ನಸೂರ್ ಅಭಿಪ್ರಾಯಪಟ್ಟಿದ್ದಾರೆ.
‘ನಾನು ನನ್ನ ಮಾನವೀಯತೆ ಕಲಿತೆ’
ಮುಹಮ್ಮದ್ ಅಮಿನ್ ಆಂಡರ್ಸನ್, ಜಾಗತಿಕವಾಗಿ ಕುಖ್ಯಾತ ಅಪರಾಧಿ. ಆತ 30 ವರ್ಷದ ಜೈಲು ಶಿಕ್ಷೆಯಲ್ಲಿದ್ದಾನೆ, ಆದರೆ, ಜೈಲಿನಲ್ಲಿ ಕಳೆದ ಎರಡು ವರ್ಷಗಳಿಂದ ಆತ ಇಸ್ಲಾಂ ಧರ್ಮ ಪಾಲಿಸುತ್ತಿದ್ದಾನೆ.
“ನಾನು ಜೈಲಿಗೆ ಬಂದಾಗ ನನ್ನಲ್ಲಿ ಮಾನವೀಯತೆ ಇರಲಿಲ್ಲ. ಆದರೆ, ಜೈಲಿನಲ್ಲಿ ಇಸ್ಲಾಂ ಸ್ವೀಕರಿಸಿದ ನಂತರ ನಾನು ನನ್ನ ಮಾನವೀಯತೆಯನ್ನು ಕಲಿತೆ ” ಎಂದು ಅವರು ಹೇಳಿದರು.
ಆಂಡರ್ಸನ್ ಅವರ ಮೂಲ ಹೆಸರು ಕ್ರಿಸ್ಟೊಫರ್ ಆಂಡರ್ಸನ್. ಫಿಲಡೆಲ್ಫಿಯಾದಲ್ಲಿ ಜನಿಸಿದ ಆತ ಕ್ರೈಸ್ತ ಧರ್ಮಗುರುವಿನ ಮಗನಾಗಿದ್ದರೂ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.
“ನಾನು ಸಾಕಷ್ಟು ವರ್ಷ ಡ್ರಗ್ ಅಡಿಕ್ಟ್ ಆಗಿದ್ದೆ. , “ನನಗೆ ಡ್ರಗ್ ಮಾರಾಟ ಮಾಡುವ ಕೆಲವರ ಜತೆ ಸಂಪರ್ಕ ಇತ್ತು. ನಾನು ಸಹ ಅವರ ಜೊತೆಗೆ ಅಕ್ರಮದಲ್ಲಿ ಪಾಲ್ಗೊಂಡಿದ್ದೆ ” ಎಂದು ಹೇಳಿದ್ದಾನೆ.
ಜೈಲಿನಲ್ಲಿ ಬೇರೆ ಧರ್ಮಗಳ ಕುರಿತಾಗಿ ಅಧ್ಯಯನ ಮಾಡಿದ ಆಂಡರ್ಸನ್, “ನನಗೆ ಅರ್ಥವಾಗುವ ಏಕೈಕ ಧರ್ಮ ಇಸ್ಲಾಂ” ಎಂದು ಹೇಳಿದ್ದಾರೆ.
ಈ ವರದಿಯ ಪ್ರಕಾರ, ಅಮೆರಿಕದ ಜೈಲುಗಳಲ್ಲಿ ಸಾವಿರಾರು ಕೈದಿಗಳು ಇಸ್ಲಾಂ ಸ್ವೀಕರಿಸುತ್ತಿದ್ದು, ಇದು ಆ ದೇಶದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.