ಐಪಿಎಲ್ ನಲ್ಲಿ ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. 18ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಸನ್ ತಂಡ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ರನ್ ದಾಖಲಿಸಿತು.
ಇಶಾನ್ ಕಿಶನ್ 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 106 ರನ್ ಗಳಿಸಿ, ತಂಡದ ಮೊತ್ತವನ್ನು ದಾಖಲೆಯಷ್ಟು ಏರಿಕೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಬಂದಿದ್ದ ಇಶಾನ್ ಕಿಶನ್ ಅವರನ್ನು 11.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರು ತಮ್ಮ ಮೇಲೆ ಹೈದರಾಬಾದ್ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 286 ರನ್‌ಗಳ ದಾಖಲೆ ಮೊತ್ತವನ್ನು ಸೇರಿಸಿತು. ಇದು ಐಪಿಎಲ್‌ನಲ್ಲಿ ದಾಖಲಾದ ಎರಡನೇ ಅತಿ ಗರಿಷ್ಠ ರನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೈದರಾಬಾದ್ ತಂಡ ಕಳೆದ ಬಾರಿಯ ಐಪಿಎಲ್‌ನಲ್ಲಿ ಬೆಂಗಳೂರು ವಿರುದ್ಧ 287 ರನ್‌ಗಳ ದಾಖಲೆಯ ರನ್ ಗಳಿಸಿದ ಸಾಧನೆ ಮಾಡಿತ್ತು. ಇಂದು 286 ರನ್ ಗಳಿಸಿದ ಸಾಧನೆ ಮಾಡಿದೆ. ಅಭಿಷೇಕ್ ಶರ್ಮಾ 11 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 24 ರನ್ ಸಿಡಿಸಿ ಔಟ್ ಆದರು. ಟ್ರಾವಿಸ್ ಹೆಡ್ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 67 ರನ್ ಗಳಿಸಿದರು. ನಿತೀಶ್ ಕುಮಾರ್ ರೆಡ್ಡಿ 15 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 30 ರನ್ ಬಾರಿಸಿದರು.