ಕರಾಕಸ್ (ವೆನೆಜುವೆಲಾ): ತೈಲ ಮತ್ತು ಚಿನ್ನದ ಮಹಾಶಕ್ತಿ ಎಂದೇ ಕರೆಯಲ್ಪಡುವ ವೆನೆಜುವೆಲಾ ಈಗ ಅಮೆರಿಕ ಸೇನಾ ದಾಳಿಯ ಬಳಿಕ ಮತ್ತೆ ವಿಶ್ವದ ಗಮನ ಸೆಳೆದಿದೆ. ವಿಶ್ವದಲ್ಲೇ ಅತಿದೊಡ್ಡ ಪ್ರಮಾಣದ ತೈಲ ಸಂಗ್ರಹ ಮತ್ತು ಅಪಾರ ಚಿನ್ನದ ನಿಕ್ಷೇಪಗಳಿರುವ ಈ ದಕ್ಷಿಣ ಅಮೆರಿಕ ದೇಶದ ಭೂಗರ್ಭ ಸಂಪತ್ತು ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದೆ.
ಭೂಗರ್ಭದಲ್ಲಿ ಅಡಗಿದ ತೈಲದ ಸಾಗರ
ಜಗತ್ತಿನ ಅತಿದೊಡ್ಡ ದೃಢೀಕೃತ ತೈಲ ಸಂಪತ್ತನ್ನು ಹೊಂದಿರುವ ವೆನೆಜುವೆಲಾದ ಹೃದಯಭಾಗದಲ್ಲಿದೆ ಒರಿನೊಕೋ ಬೆಲ್ಟ್. 55 ಸಾವಿರ ಚದರ ಕಿಲೋ ಮೀಟರ್ ವಿಸ್ತೀರ್ಣದ ಈ ಭಾಗವು ಸುಮಾರು 1,200 ಬಿಲಿಯನ್ ಬ್ಯಾರೆಲ್‌ಗಳ ಹೆಚ್ಚಿದ ದಟ್ಟತೆಯ ಕಚ್ಚಾ ತೈಲವನ್ನು ಒಳಗೊಂಡಿದೆ. ಅಮೆರಿಕ ಭೂಗರ್ಭ ಸಮೀಕ್ಷಾ ಸಂಸ್ಥೆಯು (USGS) ಅಂದಾಜಿಸಿದಂತೆ, ಇದರಲ್ಲಿಯೇ 380 ರಿಂದ 650 ಶತಕೋಟಿ ಬ್ಯಾರೆಲ್‌ಗಳನ್ನು ತಾಂತ್ರಿಕವಾಗಿ ಪಡೆಯಲು ಸಾಧ್ಯವಿದೆ. ಅಂದರೆ ಅಂದಾಜು ಸೌದಿ ಅರೇಬಿಯಾದಲ್ಲಿರುವಷ್ಟು. ಈ ತೈಲದ ಮೂಲ ಮೈಯೋಸೀನ್ ಯುಗದ ಆಸರೆಯಾದ ಒಫಿಸಿನಾ ಮತ್ತು ಮೆರೇಕುರೇ ಶಿಲಾಸಮೂಹಗಳಲ್ಲಿ ಅಡಗಿದೆ. ಉಷ್ಣತೆ ಮತ್ತು ಒತ್ತಡದಿಂದ ಈ ಶಿಲಾಸಮೂಹಗಳು ದಟ್ಟ ಕಚ್ಚಾ ತೈಲವನ್ನು ಉತ್ಪತ್ತಿ ಮಾಡಿವೆ.

ಚಿನ್ನದ ತಾಣ – ಗುಯಾನಾ ಶೀಲ್ಡ್
ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಹರಡಿರುವ ಗುಯಾನಾ ಶೀಲ್ಡ್ ಪ್ರದೇಶದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪಗಳು ಅಡಗಿವೆ. ಇಲ್ಲಿ ಸುಮಾರು 10,000 ಟನ್ ಚಿನ್ನವನ್ನು ಗಣಿಗಾರಿಕೆ ಮಾಡಬಹುದು ಎನ್ನುತ್ತಾರೆ ತಜ್ಞರು. ಈ ಪ್ರದೇಶದ ಮೆಟಾವೊಲ್ಕಾನಿಕ್ ಮತ್ತು ಮೆಟಾಸೆಡಿಮೆಂಟ್ ಶಿಲಾಸಮೂಹಗಳಲ್ಲಿ 200ಕ್ಕೂ ಹೆಚ್ಚು ಚಿನ್ನದ ತಾಣಗಳಿವೆ.
ತೈಲ, ಚಿನ್ನ ನಿಕ್ಷೇಪದ ಮೇಲೆ ಅಮೆರಿಕದ ಕಣ್ಣು
ಶುಕ್ರವಾರ ತಡರಾತ್ರಿ ನಡೆದ ‘ಆಪರೇಶನ್ ಅಬ್ಸೊಲ್ಯೂಟ್ ರಿಸಾಲ್ವ್’ ದಾಳಿಯ ನಂತರ, ಅಮೆರಿಕವು ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊರನ್ನು ಬಂಧಿಸಿದೆ. ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ನಿರ್ಬಂಧ ಉಲ್ಲಂಘನೆಯ ಆರೋಪವನ್ನು ಅಧಿಕೃತವಾಗಿ ಅವರ ವಿರುದ್ಧ ಹೊರಿಸಲಾಗಿದ್ದರೂ, ವಾಸ್ತವದಲ್ಲಿ ವೆನೆಜುವೆಲಾದಲ್ಲಿರುವ ತೈಲ ಮತ್ತು ಚಿನ್ನದ ಸಂಪತ್ತಿನ ಮೇಲೆ ಕಣ್ಣಿಟ್ಟು ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಚೀನಾ ಮತ್ತು ರಷ್ಯಾ ಪ್ರಭಾವವನ್ನು ಕಡಿಮೆ ಮಾಡುವುದು ಕೂಡ ಅಮೆರಿಕದ ಗುರಿ ಎಂದೂ ಹೇಳಲಾಗುತ್ತಿದೆ.
ವೆನೆಜುವೆಲಾದ ನೈಸರ್ಗಿಕ ಸಂಪತ್ತೇ ಈಗ ಅದಕ್ಕೆ ಶಾಪವಾಗಿ ಪರಿಣಮಿಸಿದೆ. ಪ್ರಕೃತಿಯು ತೈಲ ಮತ್ತು ಚಿನ್ನದ ಮೂಲಕ ಆ ದೇಶಕ್ಕೆ ಅದ್ಭುತವಾಗಿ ಆಶೀರ್ವದಿಸಿದರೂ, ರಾಜಕೀಯ ಅಸ್ಥಿರತೆ, ಆರ್ಥಿಕ ದೌರ್ಬಲ್ಯ ಮತ್ತು ಜಾಗತಿಕ ಹಸ್ತಕ್ಷೇಪಗಳು ಈ ಸಂಪತ್ತನ್ನು ದುಃಸ್ವಪ್ನದಂಥದಾಗಿಸಿದೆ. ಹೀಗಾಗಿ ಅಮೆರಿಕದ ದಾಳಿಯು ಭೌಗೋಳಿಕ ತೈಲದ್ರವ್ಯಕ್ಕಿಂತಲೂ ಹೆಚ್ಚಾಗಿ ಗ್ಲೋಬಲ್ ಪವರ್ ಗೇಮ್‌ನ ಭಾಗವೆಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ: ಅಮೆರಿಕ ದಾಳಿ ಬಳಿಕ ಕತ್ತಲಲ್ಲಿ ಮುಳುಗಿದ ಕರಾಕಸ್, “ವಿದ್ಯುತ್ ಇಲ್ಲ, ಭಯವೇ ಎಲ್ಲ” | ಭಾರತೀಯ ಸುನಿಲ್ ಮಲ್ಹೋತ್ರಾ



















