ಹೈದರಾಬಾದ್: ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ ಇತ್ತೀಚಿನ ಚಿತ್ರ ‘ಸ್ಪಿರಿಟ್’ ಸುತ್ತಲಿನ ವಿವಾದಕ್ಕೆ(Deepika vs Sandeep) ಸಂಬಂಧಿಸಿದಂತೆ ನಟಿಯೊಬ್ಬರ ವಿರುದ್ಧ ತೀವ್ರ ಆಕ್ಷೇಪ ಹೊರಹಾಕಿದ್ದು, ಅವರದ್ದು ‘ಡರ್ಟಿ ಪಿಆರ್ ಗೇಮ್’ ಎಂದು ಹೇಳಿದ್ದಾರೆ. ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರು ಈ ಚಿತ್ರದಿಂದ ಹೊರನಡೆದ ಬೆನ್ನಲ್ಲೇ ಹಾಗೂ ನಟಿ ತೃಪ್ತಿ ಡಿಮ್ರಿ ಅವರನ್ನು ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ದೀಪಿಕಾರನ್ನು ಉದ್ದೇಶಿಸಿಯೇ ನಿರ್ದೇಶಕ ಸಂದೀಪ್ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ವಿಶ್ಲೇಷಿಸಿವೆ.
ತೆಲುಗು ಸೂಪರ್‌ಸ್ಟಾರ್ ಪ್ರಭಾಸ್ ಪ್ರಧಾನ ಭೂಮಿಕೆಯಲ್ಲಿರುವ ‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದು ಭವಿಷ್ಯದ ಎ-ರೇಟೆಡ್ ಆಕ್ಷನ್ ಥ್ರಿಲ್ಲರ್ ಆಗಿದೆ. ಆರಂಭದಲ್ಲಿ ದೀಪಿಕಾ ಪಡುಕೋಣೆ ಅವರು ಈ ಚಿತ್ರದಲ್ಲಿ ನಾಯಕಿ ನಟಿಯ ಪಾತ್ರಕ್ಕೆ ಆಯ್ಕೆಯಾಗಿದ್ದರು ಎಂದು ವರದಿಗಳು ತಿಳಿಸಿದ್ದವು. ಆದರೆ, ಸೃಜನಾತ್ಮಕ ಭಿನ್ನತೆಗಳು, ಚಿತ್ರೀಕರಣದ ಸಮಯ, ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಒಪ್ಪದಿರುವುದು, ಮತ್ತು ಲಾಭದಲ್ಲಿ ಪಾಲುದಾರಿಕೆಯ ಬೇಡಿಕೆಗಳಂತಹ ಬೇರೆ ಬೇರೆ ಕಾರಣಗಳಿಂದ ದೀಪಿಕಾ ಚಿತ್ರದಿಂದ ಹೊರಬಂದಿದ್ದಾರೆ ಎಂದು ವರದಿಗಳು ಹೇಳಿವೆ.
ಇದರ ಬೆನ್ನಲ್ಲೇ, ಮೇ 24ರಂದು ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತೃಪ್ತಿ ಡಿಮ್ರಿ ಅವರನ್ನು ‘ಸ್ಪಿರಿಟ್’ ಚಿತ್ರದ ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ತೃಪ್ತಿ ಡಿಮ್ರಿ, ಈ ಹಿಂದೆ ವಂಗಾ ಅವರ ‘ಅನಿಮಲ್’ ಚಿತ್ರದಲ್ಲಿ ಜೋಯಾ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು.

ಮೇ 26ರಂದು, ಸಂದೀಪ್ ರೆಡ್ಡಿ ವಂಗಾ ಎಕ್ಸ್‌ನಲ್ಲಿ ಒಂದು ತೀಕ್ಷ್ಣವಾದ ಪೋಸ್ಟ್ ಅಪ್ಲೋಡ್ ಮಾಡಿದ್ದು, ಯಾವುದೇ ನಟಿಯ ಹೆಸರನ್ನು ಉಲ್ಲೇಖಿಸದೆ, “ನಾವು ಒಂದು ಕಥೆಯನ್ನು ಒಬ್ಬ ನಟಿಗೆ ವಿವರಿಸುತ್ತೇವೆಂದರೆ, ಅವರಲ್ಲಿ 100% ವಿಶ್ವಾಸವಿಟ್ಟಿರುತ್ತೇವೆ. ಆದರೆ, ಆ ನಟಿ ನನ್ನ ಕಥೆಯನ್ನು ಸೋರಿಕೆ ಮಾಡಿ, ಯುವ ನಟಿಯನ್ನು ಕೀಳಾಗಿ ಕಂಡಿದ್ದಾರೆ” ಎಂದು ಆರೋಪಿಸಿದ್ದಾರೆ. “ಶೇ.100ರಷ್ಟು ನಂಬಿಕೆ ಹಾಗೂ ವಿಶ್ವಾಸದೊಂದಿಗೆ ನಾವು ನಟಿಯರಿಗೆ ಕಥೆಯನ್ನು ಹೇಳಿರುತ್ತೇವೆ. ಅಲ್ಲಿ ಒಂದು ಅನೌಪಚಾರಿಕ ಗೌಪ್ಯತೆ ಒಪ್ಪಂದ ನಡೆದಿರುತ್ತದೆ. ಆದರೆ, ಈಗ ನನ್ನ ಕಥೆಯನ್ನು ಸೋರಿಕೆ ಮಾಡುವ ಮೂಲಕ ನೀವು ಯಾರೆಂಬುದನ್ನು ಬಹಿರಂಗಪಡಿಸಿದ್ದೀರಿ… ಯುವ ನಟಿಯನ್ನು ಕೀಳಾಗಿ ಕಂಡಿದ್ದೀರಿ, ನನ್ನ ಕಥೆಯನ್ನು ಸೋರಿಕೆ ಮಾಡಿದ್ದೀರಿ? ಇದೇನಾ ನಿಮ್ಮ ಸ್ತ್ರೀವಾದ?” ಎಂದು ಅವರು ಪ್ರಶ್ನಿಸಿದ್ದಾರೆ. ದೀಪಿಕಾ ಪಡುಕೋಣೆಯನ್ನು ಗುರಿಯಾಗಿರಿಸಿಯೇ ಅವರು ಈ ಪೋಸ್ಟ್ ಮಾಡಿರುವ ಸಾಧ್ಯತೆಯಿದೆ ಎಂದು ಹಲವು ನೆಟ್ಟಿಗರು ಊಹಿಸಿದ್ದಾರೆ.
“ನನಗೆ ಚಿತ್ರನಿರ್ಮಾಣವೇ ನನ್ನ ಸರ್ವಸ್ವ. ನೀವು ಅದನ್ನು ಅರ್ಥಮಾಡಿಕೊಂಡಿಲ್ಲ, ಎಂದಿಗೂ ಅರ್ಥಮಾಡಿಕೊಳ್ಳುವುದೂ ಇಲ್ಲ” ಎಂದಿರುವ ಸಂದೀಪ್ ವಂಗಾ, “ಐಸಾ ಕರೋ… ಅಗ್ಲಿ ಬಾರ್ ಪೂರಿ ಕಹಾನಿ ಬೋಲ್ನಾ… ಕ್ಯೂಂಕಿ ಮುಝೆ ಜರಾ ಭಿ ಫರಕ್ ನಹಿ ಪಡತಾ” (ಹೀಗೆ ಮಾಡಿ… ಮುಂದಿನ ಬಾರಿ ಸಂಪೂರ್ಣ ಕಥೆಯನ್ನು ತಿಳಿಸಿ… ನನಗೆ ಅದರಿಂದ ಯಾವುದೇ ಪರಿಣಾಮ ಆಗದು) ಎಂದೂ ಬರೆದುಕೊಂಡಿದ್ದಾರೆ.
ದೀಪಿಕಾ ವಿರುದ್ಧ ಆರೋಪಗಳು
ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಅವರು ‘ಸ್ಪಿರಿಟ್’ ಚಿತ್ರದ ಕಥೆಯ ಕೆಲವು ಭಾಗಗಳನ್ನು, ವಿಶೇಷವಾಗಿ ಎ-ರೇಟೆಡ್ ದೃಶ್ಯಗಳನ್ನು ಒಳಗೊಂಡಿರುವ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಚಿತ್ರದ ಕಥಾವಸ್ತು ಮತ್ತು ತೃಪ್ತಿ ಡಿಮ್ರಿಯ ಪಾತ್ರದ ಕುರಿತಾದ ಮಾಹಿತಿಯು ಬಹಿರಂಗವಾಗಿದೆ.
ಬಾಲಿವುಡ್ ಹಂಗಾಮಾದ ವರದಿಯ ಪ್ರಕಾರ, ದೀಪಿಕಾ ಅವರು ದಿನಕ್ಕೆ 6 ಗಂಟೆಗಳಿಗಿಂತ ಹೆಚ್ಚು ಚಿತ್ರೀಕರಣಕ್ಕೆ ಒಪ್ಪದಿರುವುದು ಮತ್ತು 100 ದಿನಗಳ ಚಿತ್ರೀಕರಣಕ್ಕಿಂತ ಹೆಚ್ಚಿನ ದಿನಗಳಿಗೆ ಹೆಚ್ಚುವರಿ ಸಂಭಾವನೆಯನ್ನು ಕೋರಿದ್ದರು. ಇದರ ಜೊತೆಗೆ, ಚಿತ್ರದ ಲಾಭದಲ್ಲಿ ಪಾಲುದಾರಿಕೆಯ ಬೇಡಿಕೆಯೂ ಇದ್ದಿತು ಎಂದು ತಿಳಿದುಬಂದಿದೆ. ಈ ಷರತ್ತುಗಳು ವಂಗಾ ಅವರ ಕೆಲಸದ ಶೈಲಿಗೆ ಸರಿಹೊಂದದ ಕಾರಣ, ದೀಪಿಕಾ ಚಿತ್ರದಿಂದ ಹೊರಬಂದರು ಎಂದು ಹೇಳಲಾಗಿದೆ.
ಇದೇ ವೇಳೆ, ತೃಪ್ತಿ ಡಿಮ್ರಿ ಅವರು ಕೇವಲ 4 ಕೋಟಿ ರೂಪಾಯಿಗಳ ಸಂಭಾವನೆಗೆ ಈ ಪಾತ್ರವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ದೀಪಿಕಾ 20 ಕೋಟಿ ರೂಪಾಯಿಗಳನ್ನು ಕೇಳಿದ್ದರು ಎನ್ನಲಾಗಿದೆ. ಈ ನಡುವೆ, ಈ ಆರೋಪಗಳಿಗೆ ದೀಪಿಕಾ ಪಡುಕೋಣೆ ಅಥವಾ ಅವರ ತಂಡ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.