ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ಕಂಗೆಟ್ಟಿರುವ ಇರಾನ್, ಕಳೆದ ಕೆಲವು ದಿನಗಳಿಂದ ಗಲ್ಫ್ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಜಗತ್ತನ್ನೇ ಬೆರಗುಗೊಳಿಸಿವೆ. ಇರಾನ್ ಬಳಿ ಅಕ್ಷಯ ಪಾತ್ರೆಯಂತೆ ಕ್ಷಿಪಣಿಗಳ ಸಂಗ್ರಹವಿದೆಯೇ ಎಂಬ ಪ್ರಶ್ನೆ ಎದ್ದಿರುವ ಬೆನ್ನಲ್ಲೇ, ಈ ಬೃಹತ್ ಕಾರ್ಯಾಚರಣೆಯ ಹಿಂದೆ ಚೀನಾದ ಕೈ ಕೆಲಸ ಮಾಡುತ್ತಿದೆ ಎಂಬ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಇರಾನ್‌ನ ಈ ‘ಘಾತಕ’ ಶಕ್ತಿಯ ಹಿಂದೆ ದಶಕಗಳ ಕಾಲದ ಚೀನಾದ ತಾಂತ್ರಿಕ ನೆರವಿನ ಕೈವಾಡವಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಮತ್ತು ಚೀನಾ ನಡುವಿನ ಮಿಲಿಟರಿ ನಂಟು ಇಂದಿನದಲ್ಲ. 1980ರ ದಶಕದ ಇರಾಕ್-ಇರಾನ್ ಯುದ್ಧದ ಸಮಯದಲ್ಲೇ ಪಾಶ್ಚಿಮಾತ್ಯ ದೇಶಗಳು ಇರಾನ್ ಮೇಲೆ ನಿರ್ಬಂಧ ಹೇರಿದ್ದಾಗ, ಚೀನಾ ನೆರವಿಗೆ ಧಾವಿಸಿತ್ತು. ಆಗಿನಿಂದಲೇ ಇರಾನ್‌ಗೆ ಹಡಗು ನಿಗ್ರಹ ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳನ್ನು ಪೂರೈಸುವ ಮೂಲಕ ಚೀನಾ ಇರಾನ್‌ನ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಇತ್ತೀಚಿನ ವರದಿಗಳ ಪ್ರಕಾರ, ಇರಾನ್‌ನ ‘ನೂರ್’ ಮತ್ತು ‘ನಾಸ್ರ್’ ಕ್ಷಿಪಣಿಗಳು ಮೂಲತಃ ಚೀನಾದ ವಿನ್ಯಾಸಗಳ ನಕಲು ಎನ್ನಲಾಗಿದೆ.
ನೇರ ಮಾರಾಟದ ಬದಲು ‘ಡ್ಯುಯಲ್ ಯೂಸ್’ ತಂತ್ರ
ಅಂತಾರಾಷ್ಟ್ರೀಯ ನಿರ್ಬಂಧಗಳ ಕಾರಣದಿಂದಾಗಿ ಚೀನಾ ಇತ್ತೀಚಿನ ವರ್ಷಗಳಲ್ಲಿ ಇರಾನ್‌ಗೆ ನೇರವಾಗಿ ಕ್ಷಿಪಣಿಗಳನ್ನು ಮಾರಾಟ ಮಾಡುವುದನ್ನು ಕಡಿಮೆ ಮಾಡಿದೆ. ಆದರೆ, ಇದಕ್ಕೆ ಪರ್ಯಾಯವಾಗಿ ‘ಡ್ಯುಯಲ್ ಯೂಸ್’ (ದ್ವಿಮುಖ ಬಳಕೆ) ತಂತ್ರಜ್ಞಾನವನ್ನು ಚೀನಾ ಯಥೇಚ್ಛವಾಗಿ ಪೂರೈಸುತ್ತಿದೆ. ನಾಗರಿಕ ಬಳಕೆಯ ಹೆಸರಿನಲ್ಲಿ ಪೂರೈಕೆಯಾಗುವ ಮೈಕ್ರೋಚಿಪ್‌ಗಳು, ಎಲೆಕ್ಟ್ರಾನಿಕ್ ಘಟಕಗಳು ಮತ್ತು ನ್ಯಾವಿಗೇಷನ್ ಕಿಟ್‌ಗಳನ್ನು ಇರಾನ್ ತನ್ನ ‘ಶಾಹೆದ್’ ಡ್ರೋನ್‌ಗಳು ಮತ್ತು ‘ಫತ್ತಾಹ್’ ಹೈಪರ್‌ಸಾನಿಕ್ ಕ್ಷಿಪಣಿಗಳಲ್ಲಿ ಬಳಸಿಕೊಳ್ಳುತ್ತಿದೆ. ಚೀನಾದ ಈ ತಾಂತ್ರಿಕ ಸಹಾಯವಿಲ್ಲದಿದ್ದರೆ ಇರಾನ್ ಈ ಮಟ್ಟದ ಸಾಮರ್ಥ್ಯ ಹೊಂದುವುದು ಅಸಾಧ್ಯವಾಗಿತ್ತು ಎಂದು ರಕ್ಷಣಾ ತಜ್ಞ ಸಂದೀಪ್ ಉನ್ನಿಥನ್ ತಿಳಿಸಿದ್ದಾರೆ.
ದಾಳಿಗೂ ಮುನ್ನವೇ ತಲುಪಿತ್ತೇ ಶಸ್ತ್ರಾಸ್ತ್ರಗಳು?
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ‘ಆಪರೇಷನ್ ಎಪಿಕ್ ಫ್ಯೂರಿ’ ನಡೆಸುವ ಕೆಲವೇ ದಿನಗಳ ಮೊದಲು ಚೀನಾವು ಟೆಹ್ರಾನ್‌ಗೆ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಮತ್ತು ಅಟ್ಯಾಕ್ ಡ್ರೋನ್‌ಗಳನ್ನು ರವಾನಿಸಿತ್ತು ಎಂದು ‘ಮಿಡಲ್ ಈಸ್ಟ್ ಐ’ ವರದಿ ಮಾಡಿದೆ. ಅಲ್ಲದೆ, ಇರಾನ್‌ನ ಕ್ಷಿಪಣಿಗಳಿಗೆ ಬೇಕಾದ ಇಂಧನವನ್ನು (Solid Propellant) ಕೂಡ ಚೀನಾ ಪೂರೈಸುತ್ತಿದೆ ಎಂಬ ಸಂಶಯ ದಟ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಶೇ.90ರಷ್ಟು ಕಚ್ಚಾ ತೈಲವನ್ನು ಚೀನಾಕ್ಕೆ ರಫ್ತು ಮಾಡುತ್ತಿದೆ. ಈ ವ್ಯವಹಾರವು ಇರಾನ್ ಅನ್ನು ಅಮೆರಿಕದ ವಿರುದ್ಧದ ಯುದ್ಧದಲ್ಲಿ ಇನ್ನೂ ಜೀವಂತವಾಗಿರಿಸಲು ನೆರವಾಗುತ್ತಿದೆ.
ಅಮೆರಿಕದ ಕಳವಳ
ಇರಾನ್‌ನ ಈ ಕ್ಷಿಪಣಿಗಳ ಮಹಾಶಕ್ತಿಯು ಅಮೆರಿಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇರಾನ್ ತನ್ನ ಕ್ಷಿಪಣಿಗಳ ವ್ಯಾಪ್ತಿಯನ್ನು 2,000 ಕಿಲೋಮೀಟರ್‌ಗೆ ಸೀಮಿತಗೊಳಿಸಿದ್ದರೂ, ಭವಿಷ್ಯದಲ್ಲಿ ಇವು ಅಮೆರಿಕದ ಭೂಭಾಗವನ್ನು ತಲುಪುವ ಸಾಮರ್ಥ್ಯ ಪಡೆಯಬಹುದು ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಚೀನಾದ CM302 ಹಡಗು ನಿಗ್ರಹ ಕ್ಷಿಪಣಿಗಳು ಮತ್ತು DF-17 ಹೈಪರ್ಸಾನಿಕ್ ಗ್ಲೈಡ್ ಕ್ಷಿಪಣಿಗಳನ್ನು ಖರೀದಿಸಲು ಇರಾನ್ ಮುಂದಾಗಿರುವುದು ಮಧ್ಯಪ್ರಾಚ್ಯದ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಲಕ್ಷಣಗಳು ಕಾಣಿಸುತ್ತಿವೆ.
ಇದನ್ನೂ ಓದಿ : ಶತ್ರು ಪಾಳಯಕ್ಕೆ ನಡುಕ ಹುಟ್ಟಿಸಲಿರುವ ಸ್ವದೇಶಿ ‘ಶೇಷನಾಗ್’ : ಸುಸೈಡ್ ಡ್ರೋನ್ ತಯಾರಿಕೆಯಲ್ಲಿ ಭಾರತ ಮೌನ ಕ್ರಾಂತಿ



















