ಕರ್ನಾಟಕ ಸಾರಿಗೆ ಸಂಸ್ಥೆ ದಿವಾಳಿಯಾಯಿತೇ? ಎಂಬ ಪ್ರಶ್ನೆಯೊಂದು ಈಗ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆ ಬಿಕಾರಿಯಾಗುತ್ತಿದೆ ಎಂಬ ಆತಂಕದ ಮಾತುಗಳು ಕೂಡ ಕೇಳಿ ಬರುತ್ತಿವೆ.
ಹೌದು! ಸಾರಿಗೆ ಸಂಸ್ಥೆಯಲ್ಲಿ ನಷ್ಟ ಹೆಚ್ಚಾಗುತ್ತಿರುವುದರಿಂದಾಗಿ ರಾಜ್ಯದಲ್ಲಿನ ನಾಲ್ಕು ನಿಗಮ ಮಂಡಳಿಗಳು ಈಗಾಗಲೇ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಮತ್ತೊಂದೆಡೆ 2 ಸಾವಿರ ಕೋಟಿ ರೂ. ಸಾಲಕ್ಕೆ ನಿರ್ಧರಿಸಲಾಗಿದೆ.
ಇದರ ಮಧ್ಯೆ ಸಾರಿಗೆ ನಿಲ್ದಾಣವನ್ನೇ ಲೀಸ್ ಗೆ ಕೊಡಲು ಸಂಸ್ಥೆ ಮುಂದಾಗಿದ್ದು, ಸಂಸ್ಥೆಯ ದಿವಾಳಿತನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಜಾಲಹಳ್ಳಿ ಸರ್ಕಲ್ ಬಳಿ ನಿರ್ಮಿಸಲಾಗಿದ್ದ ಬಸವೇಶ್ವರ ಬಸ್ ನಿಲ್ದಾಣವನ್ನು ಈಗ ಸರ್ಕಾರ, ಲೀಸ್ ಗೆ ಕೊಡಲು ಮುಂದಾಗಿದೆ. ಹೀಗಾಗಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಈ ನಿಲ್ದಾಣವನ್ನು ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ನಿರ್ಮಿಸಲಾಗಿತ್ತು. ಬೆಂಗಳೂರು ನಗರಕ್ಕೆ ಬರುವ ಸುಮಾರು 18 ಜಿಲ್ಲೆಗಳ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆಂದು ಈ ನಿಲ್ದಾಣವನ್ನು ಸ್ಥಾಪಿಸಲಾಗಿತ್ತು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಬಸ್ ಗಳು ಈ ನಿಲ್ದಾಣಕ್ಕೆ ಬರುತ್ತಿದ್ದವು. ಹೀಗಾಗಿ ಬಸವಣ್ಣನವರ ಹೆಸರಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಹತ್ತಾರು ಎಕರೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು.
ಪೀಣ್ಯದಿಂದ ನಗರದೊಳಗೆ ಬರುವ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಈಗ ಈ ನಿಲ್ದಾಣವನ್ನು ಖಾಸಗಿಯವರಿಗೆ ಬಿಟ್ಟು ಕೊಡಲು ಸರ್ಕಾರ ಮುಂದಾಗಿದೆ. ಬಸ್ ನಿಲ್ದಾಣವನ್ನು ಮದುವೆ ಮಂಟಪ ಹಾಗೂ ಖಾಸಗಿ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧರಿಸಿದ್ದು ಟೆಂಡರ್ ಗೆ ಆಹ್ವಾನ ನೀಡಿದೆ. ಹೀಗಾಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.