ಮಂಡ್ಯದ ರಾಜಕೀಯದ ವರೆಸೆಯೇ ಬದಲಾಗಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದ ರಾಜಕಾರಣದ ಸುಪರ್ದಿಯೊಳಗೆ ಕಾಂಗ್ರೆಸ್ ದಾಂಗುಡಿ ಇಟ್ಟು ವಶ ಪಡಿಸುವುದಕ್ಕೆ ಪ್ರಯತ್ನ ಪಟ್ಟರೂ ಯಶಸ್ಸಾಗಿಲ್ಲ. ಬಿಜೆಪಿ ತನ್ನ ಸಿದ್ಧಾಂತ ಹೇರುವುದಕ್ಕೆ ಪ್ರಯತ್ನಿಸಿದರೂ ಅದು ಕೂಡ ಸೋತು ಸುಣ್ಣವಾಗಿದೆ. ಈಗ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಗೂಟ ಹೋಡೆದಿದ್ದಾರೆ. ಮಂಡ್ಯದ ಯುವ ಸಮುದಾಯ ಕೂಡ ಯತ್ನಾಳ್ ಗೆ ಜೈ ಎಂದಿದ್ದಾರೆ.
ಮಂಡ್ಯ ರಾಜಕೀಯವೇ ವಿಭಿನ್ನ. ಹಳೆ ಮೈಸೂರು ಭಾಗವನ್ನು ಪ್ರತಿನಿಧಿಸಿದ ಹೆಚ್.ಡಿ ದೇವೆಗೌಡರು ಈ ದೇಶದ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಘಟಾನುಘಟಿಗಳು ಈ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಆದರೇ, ಈಗ ಮಂಡ್ಯದಲ್ಲಿ ಒಕ್ಕಲಿಗರು, ಹಿರಿ ಗೌಡರ ಕುಟುಂಬದ್ದೇ ಪಾರುಪತ್ಯ ಎಂಬ ಯಾವ ವಾತಾವರಣವೂ ಕಾಣಿಸುತ್ತಿಲ್ಲ ಎಂಬಂತಿದೆ. ಬಿಜೆಪಿಯ ಉಚ್ಛಾಟಿತ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಂಡ್ಯಕ್ಕೆ ಬಹಳದೊಡ್ಡ ಹಿರೋಯಿಕ್ ಎಂಟ್ರಿಯನ್ನೇ ಕೊಟ್ಟಿದ್ದಾರೆ. ಮಂಡ್ಯದ ನೆಲದಲ್ಲಿ ಹಿಂದುತ್ವದ ಕಹಳೆ ಮೊಳಗಿಸಿದ್ದಾರೆ.
ಹೌದು, ತನ್ನ ನೇರ, ನಡೆನುಡಿಯ ಕಾರಣದಿಂದಲೇ ಬಿಜೆಪಿಯಿಂದ ಉಚ್ಛಾಟನೆಗೊಂಡ ಯತ್ನಾಳ್, ಬಿಜೆಪಿಯನ್ನೂ ಮೀರಿ ಬೆಳೆಯುತ್ತಿದ್ದಾರೆ ಎನ್ನುವುದು ರಾಜಕೀಯ ವಲಯದ ಸದ್ಯದ ಚರ್ಚೆಯಾಗಿದೆ. ಬಿಜೆಪಿಯಲ್ಲಿ ಇರುವಾಗ ಯತ್ನಾಳ್ ಹೋದೆಲ್ಲೆಲ್ಲಾ ಹಿಂದುತ್ವದ ಜಪ ಮಾಡಿದ್ದರೂ ಒಂದು ರೀತಿಯಲ್ಲಿ ಸಾರ್ವಜನಿಕ ವಲಯಕ್ಕೆ ಒಬ್ಬ ‘ಕಾಮಿಡಿ ಪೀಸ್’ ಆಗಿಯೇ ಕಾಣಿಸಿಕೊಂಡಿದ್ದರು ಎನ್ನುವುದು ಕೂಡ ಬಿಜೆಪಿ ರಾಜಕೀಯಲದಲ್ಲೇ ಹರಿದಾಡುತ್ತಿದ್ದ ಮಾತು. ಸ್ವಲ್ಪ ತಮಾಷೆ ಅಥವಾ ವ್ಯಂಗ್ಯವಾದರೂ ಅದು ಅಪ್ಪಟ ಸತ್ಯ ಎಂದೇ ರಾಜ್ಯ ರಾಜಕೀಯದ ವಲಯ ಆಡಿಕೊಳ್ಳುತ್ತದೆ. ಬಿಜೆಪಿಯಿಂದ ಎಂದು ಉಚ್ಛಾಟನೆಯಾಗಿ ಹೊರಗೆ ಬಂದರೋ ಅಲ್ಲಿಂದ ಯತ್ನಾಳ್ ಮಾಸ್ ಲೀಡರ್ ಆಗಿ ಬೆಳೆಯುವುದಕ್ಕೆ ಆರಂಭಿಸಿದ್ದಾರೆಯೇ ಎಂಬ ಪ್ರಶ್ನೆ ಮೇಲೆ ಬಂದಿದೆ.
ಕೋಮು ದಳ್ಳುರಿಯ ಧಹಧಹಿಸುತ್ತಿರುವ ಸಕ್ಕರೆ ನಾಡಿನ ಈಗ ದ್ವೇಷದ ಕಹಿಯ ನಡುವೆಯೇ ತಮ್ಮ ಮಾತಿನ ಒಗರಿನಿಂದ ಎಲ್ಲೆಲ್ಲೂ ವಿಜಯಪುರದ ವೀರನಂತೆ ಯತ್ನಾಳ್ ವಿಜೃಂಭಿಸುತ್ತಿದ್ದಾರೆ.
ಜೆಡಿಎಸ್ ನಿಂದ ವಿಜಯಪುರದಲ್ಲಿ ನಿಂತು ಸೋತು ಸುಣ್ಣವಾಗಿದ್ದ ಯತ್ನಾಳ್, ಜೆಡಿಎಸ್ ಪ್ರಾಬಲ್ಯದ ನೆಲದಲ್ಲೆ ಮಿಂಚಿದ್ದಾರೆ. ರಾಜ್ಯ ಬಿಜೆಪಿಯನ್ನು ಯತ್ನಾಳ್ ಸಂಪೂರ್ಣ ಓವರ್ ಟೇಕ್ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಹಿಂದೂ ಪರ ಸಂಘಟನೆಗಳು ಕೂಡ ಯತ್ನಾಳ್ ಅವರ ಹಿಂದೂ ಪರ ಧ್ವನಿಗೆ ಸಾಥ್ ನೀಡುತ್ತಿದ್ದಾರೆ. ಬಿಜೆಪಿಯ ಬಣ ರಾಜಕೀಯದಿಂದ ಬೇಸತ್ತಿದ್ದ ಯತ್ನಾಳ್ ಗೆ ಈ ಪ್ರಕರಣ ರಾಜಕೀಯ ಮರುಜನ್ಮ ನೀಡಲಿದೆಯೇ ಎನ್ನುವ ಪ್ರಶ್ನೆಯೂ ಎದ್ದಿದೆ.
ನಾನು,ಪ್ರತಾಪ್ ಸಿಂಹ ಸೇರಿ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇವೆ ಎಂದು ಮಂಡ್ಯದಲ್ಲಿ ಘರ್ಜಿಸಿ, ನನ್ನ ಎದುರು ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದರು. ಆದರೇ, ಮರುದಿನವೇ ಪಕ್ಷ ಕಟ್ಟುವ ಯೋಚನೆ ಇಲ್ಲ ಎಂದು ಹೇಳಿಕೆ ನೀಡಿ ತಮ್ಮ ನಡೆಯ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಇನ್ನು, ಯತ್ನಾಳ್ ಗೆ ಈಗ ಬೆಂಬಲ ನೀಡುತ್ತಿರುವವರು ಚುನಾವಣೆಯಲ್ಲಿಯೂ ಹೀಗೆ ಬೆಂಬಲಿಸುತ್ತಾರೆಯೇ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.
ಒಟ್ಟಿನಲ್ಲಿ, ಯಡಿಯೂರಪ್ಪ, ವಿಜಯೇಂದ್ರನ ಮೇಲಿನ ಸಿಟ್ಟನ್ನು ಹೀಗೆಲ್ಲಾ ತೋರಿಸಿಕೊಳ್ಳುತ್ತಿರುವ ಯತ್ನಾಳ್, ಮುಂದಿನ ನಡೆ ಹೇಗಿರಲಿದೆ ಎನ್ನುವುದು ರಾಜಕೀಯ ಪಡಸಾಲೆಯ ಸದ್ಯದ ಚರ್ಚೆಯಾಗಿದೆ.
ನ್ಯೂಸ್ ಬ್ಯೂರೋ, ಕರ್ನಾಟಕ ನ್ಯೂಸ್ ಬೀಟ್, ಬೆಂಗಳೂರು