ರಾಮನಗರ: ರಾಜ್ಯ ರಾಜಕರಾಣದಲ್ಲಿ ಚನ್ನಪಟ್ಟಣ ಟಿಕೆಟ್ ಸುದ್ದಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಬಿಜೆಪಿ-ಜೆಡಿಎಸ್ ದೋಸ್ತಿಗೆ ಈಗ ವಿಪ ಸದಸ್ಯ ಸಿ.ಪಿ. ಯೋಗೇಶ್ವರ್ ತಲೆನೋವಾಗಿದ್ದಾರೆ. ಉಪ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗದಿದ್ದರೂ ಬಿಜೆಪಿ ತೊರೆಯುವುದಿಲ್ಲ. ನಾನು ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದಿರುವ ಯೋಗೇಶ್ವರ್ ಈಗ ಜೆಡಿಎಸ್ ಪಕ್ಷದ ಚಿಹ್ನೆ ಮೂಲಕ ಸ್ಪರ್ಧೆ ಮಾಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದರೂ ಓಕೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡರೂ ಪರವಾಗಿಲ್ಲ. ನನ್ನ ಪಕ್ಷ ನಿಷ್ಠೆ ಅಚಲ. ಜೆಡಿಎಸ್ ಚಿಹ್ನೆ ಮೂಲಕ ಸ್ಪರ್ಧೆ ಮಾಡುವಂತೆ ಸೂಚಿಸಿದರೂ ನಾನು ಬದ್ದ ಎಂದು ಹೇಳಿದ್ದಾರೆ.
ಈ ಮೂಲಕ ಜೆಡಿಎಸ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಟಿಕೆಟ್ ಗೆ ದುಂಬಾಲು ಬೀಳುತ್ತಿದ್ದಂತೆ ಜೆಡಿಎಸ್ ಗೆದ್ದ ಕ್ಷೇತ್ರ ಎಂಬ ಕಾರಣವನ್ನು ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದರು. ನಿಖಿಲ್ ಕೂಡ ಈ ಹೇಳಿಕೆ ನೀಡಿದ್ದರು. ಈ ವಿಷಯವಾಗಿಯೇ ಈಗ ಬಿಜೆಪಿ-ಜೆಡಿಎಸ್ ದೋಸ್ತಿ ಮಧ್ಯೆ ಫೈಟ್ ಶುರುವಾಗಿದೆ. ಆದರೆ, ಜೆಡಿಎಸ್ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡತ್ತಾ? ಅಥವಾ ಜೆಡಿಎಸ್ ಚಿಹ್ನೆಯಿಂದ ಯೋಗೇಶ್ವರ್ ಗೆ ಅವಕಾಶ ನೀಡತ್ತಾ? ಇಲ್ಲವೇ, ತನ್ನ ಬಳಿಯೇ ಕ್ಷೇತ್ರ ಉಳಿಸಿಕೊಳ್ಳಲಿದೆಯೇ? ಕಾಯ್ದು ನೋಡಬೇಕಿದೆ.