ಬಿಬಿಎಂಪಿ ಖಜಾನೆ ಖಾಲಿಯಾಗಿದ್ದು, ಹಣಕ್ಕಾಗಿ ಹೊಸ ಹೊಸ ಯೋಜನೆಯ ಮೊರೆ ಹೋಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಬಿಬಿಎಂಪಿಯ ಖಜಾನೆ ಖಾಲಿಯಾಗಿದ್ದರಿಂದಾಗಿ ಅದು ಬಿಕರಿಯಾಯಿತೇ? ಎಂಬ ಅನುಮಾನವೊಂದು ಈಗ ಕಾಡುವಂತಾಗಿದೆ. ಬಿಬಿಎಂಪಿ ಹೊರಡಿಸಿರುವ ಸಾಲದ ಪತ್ರವೇ ಈ ಸಂಶಯಕ್ಕೆ ಕಾರಣವಾಗುತ್ತಿದೆ. ಸಾಲದ ಸೂಳಿಗೆ ಸಿಲುಕಿರುವ ಬಿಬಿಎಂಪಿ, ಜನರ ಅನುಕಂಪ ಗಳಿಸಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆಯೇ? ಅಥವಾ ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸುತ್ತಿರುವುದಕ್ಕೆ ಖಜಾನೆ ಖಾಲಿಯಾಗಿದೆಯೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗಾಗಿ ಬಿಬಿಎಂಪಿ ಸಾಲದ ಮೊರೆ ಹೋಗಿದೆ. ನಗರದ ಟ್ರಾಫಿಕ್ ದಟ್ಟಣೆ ತಪ್ಪಿಸಲು ಟನಲ್ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದ್ದು, ಸಾವಿರಾರು ಕೋಟಿ ರೂ. ಸಾಲಕ್ಕೆ ಕೈ ಚಾಚಿದೆ. ನಗರದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಟನಲ್ ರಸ್ತೆ ನಿರ್ಮಾಣದ ಡಿಪಿಅರ್ ಸಿದ್ದ ಪಡಿಸಲಾಗಿದ್ದು, ಹಣಕಾಸು ಕೊರತೆಯಿಂದ ಬ್ಯಾಂಕ್ ಅಥವಾ ಖಾಸಗಿ ಸಂಸ್ಥೆಯಿಂದ ಸಾಲಕ್ಕೆ ಬೇಡಿಕೆ ಇಟ್ಟಿದೆ. ಈ ಕುರಿತು ಬಿಬಿಎಂಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಟನಲ್ ರಸ್ತೆಯ ಯೋಜನೆಗೆ ಬೆಂಗಳೂರು ಟ್ವನ್ ಟನಲ್ ಪ್ರಾಜೆಕ್ಟ್ ಎಂದು ಹೆಸರಿಡಲಾಗಿದೆ. ಈ ಯೋಜನೆಗೆ ಸಾಲ ನೀಡಲು ಸಿದ್ದವಿರುವ ಬ್ಯಾಂಕ್ ಅಥವಾ ಖಾಸಗಿ ಸಂಸ್ಥೆಗಳು ಸಾಲ ನೀಡಬಹುದು. ಈ ಬಗ್ಗೆ ಅರ್ಥಿಕ ಬಿಡ್ ಅಹ್ವಾನಿಸಲಾಗಿದೆ. ಸುಮಾರು 19 ಸಾವಿರ ಕೋಟಿ ರೂ. ಸಾಲ ನೀಡುವಂತೆ ಬಿಬಿಎಂಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಸಾಲ ನೀಡುವ ಬ್ಯಾಂಕ್ ಅಥವಾ ಖಾಸಗಿ ಸಂಸ್ಥೆಗಳು ಅರ್ ಬಿಐ ನೋಂದಣಿ ಹೊಂದಿರಬೇಕು. ಸಾಲ ನೀಡುವ ಬ್ಯಾಂಕ್ ಅಥವಾ ಸಂಸ್ಥೆಗೆ ಸರ್ಕಾರ ಗ್ಯಾರಂಟಿ ನೀಡಲಿದೆ. ಆದರೆ, ಬಿಬಿಎಂಪಿ ಯಾವುದೇ ಕಟ್ಟಡಗಳನ್ನು ಅಡಮಾನ ಇಡುವುದಿಲ್ಲ. ಅಡಮಾನ ಇಡುವ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಕೊಡುವ ಸಾಲಕ್ಕೆ 2025ರ ಏಪ್ರಿಲ್ ನಲ್ಲಿ ಮೊದಲ ಕಂತನ್ನು ಡ್ರಾ ಮಾಡಲಾಗುತ್ತದೆ. ಉಳಿದ ಹಣವನ್ನು 2027ರ ಡಿಸೆಂಬರ್ ನಲ್ಲಿ ಡ್ರಾ ಮಾಡಲಾಗುತ್ತದೆ ಎಂಬ ಷರತ್ತು ವಿಧಿಸಲಾಗುವುದು. ಟನಲ್ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು ಉದ್ಧೇಶಿಸಲಾಗಿದೆ ಎಂದು ಬಿಬಿಎಂಪಿ ಹೇಳಿದ್ದು, ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.