ಬೆಂಗಳೂರು: ಚಿತ್ರರಂಗದವರ ವಿರುದ್ಧ ಮಾತನಾಡಿದ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಆರ್ ಆರ್ ನಗರ (RR Nagara) ಶಾಸಕ ಮುನಿರತ್ನ(Munirathna) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದವರು ಡಿಕೆಶಿ ಜೀತದಾಳಾ? ಎಂದು ಪ್ರಶ್ನಿಸಿದ್ದಾರೆ. ನಟ್ಟು, ಬೋಲ್ಟು ಟೈಟ್ ಮಾಡುತ್ತೇನೆ. ನನಗೆ ಗೊತ್ತಿದೆ. ಸರ್ಕಾರದ ಸವಲತ್ತು ಸಿಗದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗ ಅವರದ್ದಲ್ಲ, ಅದು ತನ್ನ ಶ್ರಮದಿಂದ ದೊಡ್ಡದಾಗಿ ಬೆಳೆದಿದೆ. ಈ ರೀತಿ ಹಗುರವಾಗಿ ಮಾತನಾಡುವುದು ಶೋಭೆಯಲ್ಲ. ಮೊದಲು ನಿಮ್ಮವರ ನಟ್ಟು, ಬೋಲ್ಟು ಸರಿ ಮಾಡಿಕೊಳ್ಳಿ. ನಿಮ್ಮ ಟೆಂಟ್ ನಲ್ಲಿ ಸಿನಿಮಾ ಹಾಕಿದವರು ನೀವು. ನೀವು ಕೂಡ ಸಿನಿಮಾದವರೇ ಎಂದು ಗುಡುಗಿದ್ದಾರೆ.
ಮೇಕೆದಾಟು ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಭಾವಚಿತ್ರ ಬಳಕೆ ಆಗಿದೆ. ಈ ಪಾದಯಾತ್ರೆಯಲ್ಲಿ ಚಿತ್ರರಂಗದ ಕಲಾವಿದರು ಭಾಗವಹಿಸಬೇಕಾ? ಎಲ್ಲಾದರೂ ಕನ್ನಡ ಭಾವುಟ ಇದೆಯಾ? ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.