ಬೆಂಗಳೂರು | ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (SIT) ಬಂಗ್ಲೆ ಗುಡ್ಡೆಯಲ್ಲಿ ಮತ್ತೆ ಉತ್ಖನನ ಕಾರ್ಯ ಕೈಗೊಳ್ಳಲು ಗಂಭೀರ ಚಿಂತನೆ ನಡೆಸುತ್ತಿದೆ. ಮೂಲಗಳ ಪ್ರಕಾರ, ಈ ಪ್ರದೇಶವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ಇಲ್ಲಿ ಇನ್ನಷ್ಟು ಸವಿಸ್ತಾರ ಪರಿಶೀಲನೆ ಅಗತ್ಯವಿದೆ ಎಂಬ ನಿಲುವಿಗೆ SIT ಬಂದಿದೆ ಎಂದು ವರದಿಯಾಗಿದೆ.
ಹೌದು.. ಈ ಹಿಂದೆ ವಿಠ್ಠಲ ಗೌಡ ಬಂಗ್ಲೆ ಗುಡ್ಡೆಯಿಂದ ಬುರುಡೆ ತಂದ ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ದೊರೆತ 7 ಮಾನವ ಅಸ್ಥಿಪಂಜರ ಮತ್ತು ಮಾನವ ಮೂಳೆ ಮೇಲ್ಭಾಗದಲ್ಲಿಯೇ ಸಿಕ್ಕಿವೆ. ಹೀಗಾಗಿ ಈ ಸ್ಥಳವನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ನಾಪತ್ತೆಯಾದವರ ಮತ್ತು ಅಸಹಜ ಸಾವುಗಳ ಸಂಪೂರ್ಣವಾಗಿ ಶೋಧ ಮಾಡಬೇಕು ಎನ್ನುವ ನಿರ್ಣಯಕ್ಕೆ SIT ಬಂದಿದೆ ಎನ್ನಲಾಗಿದೆ.
ಈ ಹಿಂದೆ ಮಾನವ ಮೂಳೆ ಮತ್ತು ಅವಶೇಷಗಳ ಕುರಿತು ವರದಿಯಾದ ಬಳಿಕ SIT ತನಿಖೆಯನ್ನು ಚುರುಕುಗೊಳಿಸಿ ಸಾಕಷ್ಟು ತನಿಖೆ ನಡೆಸಿತ್ತು. ಚಿನ್ನಯ್ಯ ನ್ಯಾಯಾಲಯದಲ್ಲಿ ನೀಡಿದ ಪ್ರಾಥಮಿಕ ಹೇಳಿಕೆಯಿಂದ ನಂತರ ದಿನಗಳಲ್ಲಿ ಹಿಂದೆ ಸರಿದು ವ್ಯತಿರಿಕ್ತ ಹೇಳಿಕೆ ನೀಡಿ ಜೈಲು ಪಾಲಾಗಿದ್ದನು.
ಆದರೆ, ಆತ ತೋರಿದ ಜಾಗದಲ್ಲಿಯೇ ಸಾವಿರ ಸಂಖ್ಯೆಯಲ್ಲಿ ಮಾನವ ಮೂಳೆ ಅವಶೇಷಗಳು ಪತ್ತೆಯಾಗಿರುವಾಗ ಸಂಪೂರ್ಣ ಶೋಧ ಕಾರ್ಯ ನಡೆಸಿ ತನಿಖೆ ಮುಂದುವರೆಸಬೇಕು ಎನ್ನುವ ನಿರ್ಣಯಕ್ಕೆ SIT ಬಂದಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ : 9ನೇ ಮಹಡಿಯಿಂದ ಜಿಗಿದು ಮೂವರು ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆ!



















