ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಯುವ ತಾರೆ, ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಬ್‌ಮನ್ ಗಿಲ್ (Shubman Gill) ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಕ ಆಕಾಶ್ ಚೋಪ್ರಾ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಇತ್ತೀಚೆಗೆ ನಡೆದ ಏಷ್ಯಾಕಪ್ 2025ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗಿಲ್ ಅವರ ಕಳಪೆ ಪ್ರದರ್ಶನವನ್ನು ಉಲ್ಲೇಖಿಸಿರುವ ಚೋಪ್ರಾ, “ದೊಡ್ಡ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸುವುದು ಗಿಲ್ ಅವರಂತಹ ಆಟಗಾರನಿಗೆ ಶೋಭೆಯಲ್ಲ,” ಎಂದು ನೇರವಾಗಿ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 147 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುತ್ತಿತ್ತು. ಈ ಸಂದರ್ಭದಲ್ಲಿ ಉಪನಾಯಕನಾಗಿ ಗಿಲ್ ಅವರಿಂದ ಜವಾಬ್ದಾರಿಯುತ ಆಟವನ್ನು ನಿರೀಕ್ಷಿಸಲಾಗಿತ್ತು. ಆದರೆ, ಕೇವಲ 12 ರನ್ (10 ಎಸೆತ) ಗಳಿಸಿ ಫಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದರು. ತಿಲಕ್ ವರ್ಮಾ ಅವರ ಆಟದಿಂದ ಭಾರತ ಪಂದ್ಯ ಗೆದ್ದರೂ, ಗಿಲ್ ಅವರ ವೈಫಲ್ಯ ಚರ್ಚೆಗೆ ಗ್ರಾಸವಾಗಿದೆ.
“ಶುಬ್‌ಮನ್ ಗಿಲ್ ಅವರನ್ನು 150 ರನ್‌ಗಳಂತಹ ಕಡಿಮೆ ಮೊತ್ತದ ಪಂದ್ಯಗಳನ್ನು ಗೆಲ್ಲಿಸಿಕೊಡಲು ತಯಾರು ಮಾಡಲಾಗಿದೆ. ಅಂತಹ ನಿರ್ಣಾಯಕ ಹಂತದಲ್ಲಿ ರನ್ ಗಳಿಸದಿರುವುದು ದೊಡ್ಡ ಸಮಸ್ಯೆ. ಉಳಿದವರು ಸ್ಟ್ರೋಕ್ ಮೇಕರ್ಸ್ ಆಗಿರಬಹುದು, ಆದರೆ ಗಿಲ್ ಅವರಿಂದ ಸ್ಥಿರತೆಯನ್ನು ನಿರೀಕ್ಷಿಸಲಾಗುತ್ತದೆ,” ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಂತರಾಷ್ಟ್ರೀಯ ಪಂದ್ಯಗಳ ಒತ್ತಡ:
“ಐಸಿಸಿ ಟೂರ್ನಿಗಳು ಅಥವಾ ಏಷ್ಯಾಕಪ್‌ನಂತಹ ಬಹು-ರಾಷ್ಟ್ರಗಳ ಟೂರ್ನಿಗಳಲ್ಲಿ (Multi-nation tournaments) ದ್ವಿಪಕ್ಷೀಯ ಸರಣಿಗಳಂತೆ 250-300 ರನ್ ಹರಿದು ಬರುವುದಿಲ್ಲ. ಇಲ್ಲಿ ಪ್ರತಿಯೊಬ್ಬರೂ ಭಯದಿಂದ ಆಡುತ್ತಾರೆ. ಇಂತಹ ಕಡಿಮೆ ಸ್ಕೋರ್‌ನ ಪಂದ್ಯಗಳಲ್ಲಿ ಗಿಲ್ ಅವರಂತಹ ಕ್ಲಾಸಿಕ್ ಬ್ಯಾಟರ್‌ಗಳ ಪಾತ್ರ ಮಹತ್ವದ್ದು,” ಎಂದು ಚೋಪ್ರಾ ವಿಶ್ಲೇಷಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಎಂಟ್ರಿ ಖಚಿತ?
ಟಿ20 ಕ್ರಿಕೆಟ್‌ನಲ್ಲಿ ಗಿಲ್ ಅವರ ನಿರಂತರ ವೈಫಲ್ಯ, ಯಶಸ್ವಿ ಜೈಸ್ವಾಲ್ (Yashasvi Jaiswal) ಅವರಿಗೆ ಬಾಗಿಲು ತೆರೆಯುವ ಸಾಧ್ಯತೆ ಇದೆ. “ಜೈಸ್ವಾಲ್ ಅವರನ್ನು ಹೆಚ್ಚು ಕಾಲ ತಂಡದಿಂದ ಹೊರಗಿಡಲು ಸಾಧ್ಯವಿಲ್ಲ. ಅವರು ಸದ್ಯದಲ್ಲೇ ಟಿ20 ಮತ್ತು ಏಕದಿನ ತಂಡದಲ್ಲಿ ಖಾಯಂ ಸ್ಥಾನ ಪಡೆಯಲಿದ್ದಾರೆ. 2026ರ ಟಿ20 ವಿಶ್ವಕಪ್ ತಂಡದಲ್ಲಿ ಅವರು ಖಂಡಿತವಾಗಿಯೂ ಇರುತ್ತಾರೆ,” ಎಂದು ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಸರ್‌ಫರಾಜ್ ಖಾನ್ ವಿಚಾರದಲ್ಲಿ ಅಸಮಾಧಾನ:
ಇದೇ ವೇಳೆ ಸರ್‌ಫರಾಜ್ ಖಾನ್ (Sarfaraz Khan) ಅವರನ್ನು ಕಡೆಗಣಿಸುತ್ತಿರುವ ಬಗ್ಗೆಯೂ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸರ್‌ಫರಾಜ್ ವಿದೇಶಿ ಪಿಚ್‌ಗಳಲ್ಲಿ (SENA countries) ಆಡಲು ಯೋಗ್ಯರಲ್ಲ ಎಂಬ ಪೂರ್ವಾಗ್ರಹ ಆಯ್ಕೆಗಾರರಲ್ಲಿದೆ. ಕನಿಷ್ಠ ಅವರಿಗೆ ವಿಫಲವಾಗಲು ಒಂದು ಅವಕಾಶವನ್ನಾದರೂ ನೀಡಬೇಕಿತ್ತು,” ಎಂದು ಅವರು ಹೇಳಿದ್ದಾರೆ.
ಗಿಲ್ ಅವರ ಮುಂದಿನ ಹಾದಿ ಸುಗಮವಾಗಿಲ್ಲ ಎಂಬುದು ಚೋಪ್ರಾ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಆಸ್ಟ್ರೇಲಿಯಾ ಸರಣಿ ಮತ್ತು ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಗಿಲ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ.
ಇದನ್ನೂ ಓದಿ: ಕಾಜಿರಂಗದ ಸೊಬಗಿಗೆ ಕುಂಬ್ಳೆ ಫಿದಾ ; “ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಬನ್ನಿ” ಎಂದ ಕ್ರಿಕೆಟ್ ದಿಗ್ಗಜ



















