ಮುಂಬೈ: “ನಟ ಸೈಫ್ ಅಲಿ ಖಾನ್(Saif Ali Khan) ಅವರಿಗೆ ನಿಜವಾಗಲೂ ಯಾರಾದರೂ ಚೂರಿ ಇರಿದಿದ್ದರೋ ಅಥವಾ ಅವರು ಸುಮ್ಮನೆ ನಟನೆ ಮಾಡಿದರೋ?”
ಹೀಗೊಂದು ಪ್ರಶ್ನೆಯನ್ನೆತ್ತುವ ಮೂಲಕ ಮಹಾರಾಷ್ಟ್ರದ ಸಚಿವರಾದ ನಿತೇಶ್ ರಾಣೆ(Nitesh Rane) ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ತಮ್ಮ ಮುಂಬೈನ(mumbai) ಬಂಗಲೆ ಮೇಲೆ ದಾಳಿಕೋರ ನುಗ್ಗಿ, 6 ಬಾರಿ ಚಾಕು ಇರಿದಿದ್ದರಿಂದ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಅವರು ಮಂಗಳವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಾರೆ. ಅದರ ಬೆನ್ನಲ್ಲೇ ಸಚಿವ ರಾಣೆಯವರು ಈ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಗುರುವಾರ ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ರಾಣೆ, “ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಿಂದ (hospital)ಡಿಸ್ಚಾರ್ಜ್ ಆಗಿ ಹೊರಬರುತ್ತಿರುವ ದೃಶ್ಯ ನೋಡಿದರೆ, ಅವರಿಗೆ ನಿಜವಾಗಲೂ ಚೂರಿ ಇರಿತ ಆಗಿತ್ತೇ ಅಥವಾ ಅವರು ನಾಟಕವಾಡಿದರೋ ಎಂದು ಅನುಮಾನ ಮೂಡಿದೆ” ಎಂದಿದ್ದಾರೆ. ಅಲ್ಲದೆ, ಪ್ರತಿಪಕ್ಷಗಳ ನಾಯಕರ ವಿರುದ್ಧವೂ ಆಕ್ರೋಶ ಹೊರಹಾಕಿರುವ ಸಚಿವ ರಾಣೆ, “ಖಾನ್ ಎಂಬ ಹೆಸರಿನವರು ಸಂಕಷ್ಟದಲ್ಲಿದ್ದಾಗ ಮಾತ್ರ” ಪ್ರತಿಪಕ್ಷಗಳಿಗೆ ಎಚ್ಚರವಾಗುತ್ತದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಸಂದರ್ಭದಲ್ಲಿ ಎನ್‌ಸಿಪಿ(ಎಸ್ಪಿ) ನಾಯಕ ಜಿತೇಂದ್ರ ಅವ್ಹಾದ್(Jitendra Awad) ಆಗಲೀ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆಯವರಾಗಲೀ ಏಕೆ ತುಟಿ ಬಿಚ್ಚಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.
“ಸುಪ್ರಿಯಾ ಸುಳೆಯವರಿಗೆ ಸೈಫ್ ಅಲಿ ಖಾನ್, ಶಾರುಖ್ ಖಾನ್ ಪುತ್ರ ಮತ್ತು ಎನ್ ಸಿಪಿ ನಾಯಕ ನವಾಬ್ ಮಲಿಕ್ (Nawab Malik) ಅವರ ಬಗ್ಗೆಯಷ್ಟೇ ಚಿಂತೆ. ಯಾವುದಾದರೂ ಹಿಂದೂ ಕಲಾವಿದನಿಗೆ ಸಂಬಂಧಿಸಿ ಅವರು ಕಳವಳ ವ್ಯಕ್ತಪಡಿಸಿದ್ದನ್ನು ಎಂದಾದರೂ ಕೇಳಿದ್ದೀರಾ” ಎಂದೂ ರಾಣೆ ಪ್ರಶ್ನಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಸಚಿವ ರಾಣೆ, “ಹಿಂದೆಲ್ಲ ಬಾಂಗ್ಲಾದೇಶಿಗಳು ಮುಂಬೈನ ಬಂದರಿನಲ್ಲಿ ಬಂದು ನೆಲೆಸಿದ್ದರು. ಈಗ ಅವರು ಮನೆಗಳೊಳಗೆ ಪ್ರವೇಶಿಸಲು ಆರಂಭಿಸಿದ್ದಾರೆ. ಒಂದೋ ಆತ ಸೈಫ್ ಅಲಿ ಖಾನನ್ನು ಕರೆದುಕೊಂಡು ಹೋಗಲು ಬಂದಿರಲೂಬಹುದು” ಎಂದೂ ವ್ಯಂಗ್ಯವಾಡಿದ್ದಾರೆ.
ಕಳೆದ ವಾರ ಸೈಫ್ ಬಂಗಲೆಗೆ ನುಗ್ಗಿದ್ದ ದಾಳಿಕೋರ, ಸೈಫ್ ಅವರಿಗೆ 6 ಬಾರಿ ಚೂರಿ ಇರಿದು ಪರಾರಿಯಾಗಿದ್ದ. ಸತತ 4 ದಿನಗಳ ಶೋಧದ ಬಳಿಕ ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ದಾಳಿಕೋರ ಮೊಹಮ್ಮದ್ ಶೆಹಜಾದ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.