ನವದೆಹಲಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ‘ಆಪರೇಷನ್ ಸಿಂಧೂರ’ ರಾಜತಾಂತ್ರಿಕ ತಂಡದ ಜೊತೆ ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಯತ್ನಿಸಿ ಮುಜುಗರಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದು, ಬಿಜೆಪಿಯ ಯುವ ಸಂಸದರೊಬ್ಬರು ಅಮೆರಿಕದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯವಾಗಿ ಭೇಟಿಗೆ ಯತ್ನಿಸಿದ್ದರ ಬಗ್ಗೆ ಲೇವಡಿ ಮಾಡಿದ್ದಾರೆ.
ಈ ಸುದ್ದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡ ಖರ್ಗೆ, ಈ ‘ರಾಜತಾಂತ್ರಿಕ ಉಲ್ಲಂಘನೆ’ಯ ಕುರಿತು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದಿಂದ ಉತ್ತರಗಳನ್ನು ಕೋರಿದ್ದಾರೆ. ಈ ವರದಿ ನಿಜವಾಗಿದ್ದರೆ ಅದು ಅತ್ಯಂತ ನಾಚಿಕೆಗೇಡಿನ ಸಂಗತಿ. ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ರಾಜತಾಂತ್ರಿಕ ಶಿಷ್ಟಾಚಾರವನ್ನು ಮೀರಿ ಸಂಸದರೊಬ್ಬರು ಟ್ರಂಪ್ ಅವರ ಭೇಟಿಗೆ ಯತ್ನಿಸಿದ್ದರು? ವಿದೇಶಾಂಗ ಸಚಿವಾಲಯಕ್ಕೆ ಇದರ ಬಗ್ಗೆ ತಿಳಿದಿತ್ತೇ? ಈ ವ್ಯಕ್ತಿ ಅಧಿಕೃತ ನಿಯೋಗದ ಭಾಗವಾಗಿದ್ದಾಗ ಇಂತಹ ಅಪ್ರಬುದ್ಧ ಕೃತ್ಯಕ್ಕೆ ಸಮರ್ಥನೆ ಏನು? ಈ ಬಿಜೆಪಿ ಸಂಸದ ಯಾರು ಮತ್ತು ಸರ್ಕಾರ ಈ ಉಲ್ಲಂಘನೆಯ ಬಗ್ಗೆ ಯಾವ ಕ್ರಮ ಕೈಗೊಂಡಿತು? ಎಂದು ಪ್ರಶ್ನಿಸಿದ್ದಾರೆ.
ಅಮೆರಿಕದ ಅಧ್ಯಕ್ಷರು ಪಾಕಿಸ್ತಾನದ ಪರವಾಗಿ ಬಹಿರಂಗವಾಗಿ ನಿಂತು “ಆಪರೇಷನ್ ಸಿಂಧೂರ್” ನಲ್ಲಿ ಕದನ ವಿರಾಮದ ಕೀರ್ತಿಯನ್ನು ಪಡೆದಿದ್ದು ಈ ಘಟನೆ ಇನ್ನಷ್ಟು ಚಿಂತಾಜನಕವಾಗುತ್ತದೆ ಎಂದು ಖರ್ಗೆ ಬರೆದಿದ್ದಾರೆ. ಇದು ಸಣ್ಣ ರಾಜಕೀಯ ಗಾಸಿಪ್ ಅಲ್ಲ, ಆದರೆ ಭಾರತದ ಸಾಂಸ್ಥಿಕ ಘನತೆ ಮತ್ತು ರಾಜತಾಂತ್ರಿಕ ಖ್ಯಾತಿಯ ಮೇಲಿನ ದಾಳಿ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.



















