ಬೆಂಗಳೂರು: ರಾಜ್ಯದಲ್ಲಿ ಶೇ 80 ರಷ್ಟು ನಾಗರಿಕರು ಬಡತನ ರೇಖೆಗಿಂತ ಕೆಳಗಿದ್ದಾರೆಯೇ? ಹಾಗಾದರೆ ಕರ್ನಾಟಕ ಬಡತನದಿಂದ ನರಳುತ್ತಿದೆಯೇ? ಹೀಗೊಂದು ಪ್ರಶ್ನೆ ಈಗ ಉದ್ಭವವಾಗಿದೆ.
ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಅಧಿಕಾರಿಗಳ ಸಭೆಯಲ್ಲಿ ಇತ್ತೀಚೆಗೆ ಈ ರೀತಿ ಕೇಳಿದ್ದಾರೆ. ರಾಜ್ಯದಲ್ಲಿ ಬೋಗಸ್ ಬಿಪಿಎಲ್ ಕಾರ್ಡ್ ಗಳು ಹೆಚ್ಚಾಗಿದ್ದು, ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಈ ಪ್ರಶ್ನೆಯೊಂದು ಅಧಿಕಾರಿಗಳ ಮುಂದೆ ತೂರಿ ಬಂತು.
ಬೋಗಸ್ ಬಿಪಿಎಲ್ ಕಾರ್ಡ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ತಮಿಳುನಾಡಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪ್ರಮಾಣ ಶೇ. 40ರಷ್ಟಿದೆ. ನೀತಿ ಆಯೋಗದ ಪ್ರಕಾರ ಕರ್ನಾಟಕದಲ್ಲಿ ಕೇವಲ ಶೇ. 5.67ರಷ್ಟು ನಾಗರಿಕರು ಮಾತ್ರ ಬಿಪಿಎಲ್ ಹೊಂದಿರಬೇಕು. ಆದರೆ, ರಾಜ್ಯದಲ್ಲಿ 4.67 ಕೋಟಿ ಜನರಿದ್ದು, 1.47 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ನಿಜವಾದ ಬಡವರಿಗೆ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ನೀಡುವುದರ ಜತೆಗೆ ಎಲ್ಲಾ ಬೋಗಸ್ ಕಾರ್ಡ್ ಗಳನ್ನು ತೊಡೆದುಹಾಕಬೇಕು ಎಂದು ಈ ಸಂದರ್ಭದಲ್ಲಿ ಸೂಚಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ 2.95 ಲಕ್ಷ ಹೊಸ ಪಡಿತರ ಚೀಟಿ ಅರ್ಜಿಗಳು ಬಾಕಿ ಉಳಿದಿವೆ. 2021 ಡಿಸೆಂಬರ್ ಮತ್ತು 2024 ರ ಫೆಬ್ರವರಿ ನಡುವೆ ಅಧಿಕಾರಿಗಳು 6.17 ಲಕ್ಷ ಬೋಗಸ್ ಬಿಪಿಎಲ್ ಕಾರ್ಡ್ ಗಳನ್ನು ಪತ್ತೆ ಮಾಡಿ ಪಟ್ಟಿಯಿಂದ ತೆಗೆಯಲಾಗಿದೆ. ಸರ್ಕಾರದ ಅನ್ನ ಭಾಗ್ಯ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಗುರುತಿಸುವಿಕೆಗೆ ಇದು ಈಗ ಅತಿ ಮುಖ್ಯ ಆಧಾರವಾಗಿದೆ. ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳ ಪೈಕಿ ಈ ಎರಡು ಯೋಜನೆಗಳಿಗೇ 28,000 ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಬೋಗಸ್ ಕಾರ್ಡ್ ಗಳನ್ನು ಕೂಡಲೇ ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಬೇಕೆಂದು ಸಿಎಂ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.