ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಚಿಕ್ಕರಂಗಶೆಟ್ಟಿದೊಡ್ಡಿ ಗ್ರಾಮದಲ್ಲಿ ಕಾಡಾನೆಯ ಚಾಲಾಕಿತನ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಂತಿ ಬೇಲಿಯಲ್ಲಿ ಕರೆಂಟ್ ಹರಿಯುತ್ತಿದೆಯೇ ಇಲ್ಲವೇ ಎಂದು ಪರಿಶೀಲಿಸಿ ಬಳಿಕವೇ ಅದನ್ನು ದಾಟಿದ ಆನೆಯ ವರ್ತನೆ ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.
ಘಟನೆಯ ವಿವರಗಳ ಪ್ರಕಾರ, ಕಾಡಿನಿಂದ ನಿತ್ಯ ಗ್ರಾಮಕ್ಕೆ ಬರುವ ಸಲಗ ಮೊದಲು ತನ್ನ ಕಾಲಿನಿಂದ ತಂತಿ ಬೇಲಿಯನ್ನು ಸ್ಪರ್ಶಿಸಿ ಕರೆಂಟ್ ಇರುವುದನ್ನು ಪರಿಶೀಲಿಸಿದೆ. ಕರೆಂಟ್ ಇಲ್ಲವೆಂದು ಖಚಿತಪಡಿಸಿಕೊಂಡ ಬಳಿಕವೇ ಅದು ಸುಲಭವಾಗಿ ಬೇಲಿಯನ್ನು ದಾಟಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗ್ರಾಮಸ್ಥರ ಪ್ರಕಾರ, ಈ ಕಾಡಾನೆ ಪದೇ ಪದೇ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದಲ್ಲದೆ, ಸೋಲಾರ್ ಬೇಲಿಗೂ ಹಾನಿ ಮಾಡುತ್ತಿದೆ. ಕಾಡಾನೆಯ ಉಪಟಳದಿಂದ ಕಂಗೆಟ್ಟಿರುವ ಸ್ಥಳೀಯರು ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಡಿಜೆ ಹಳ್ಳಿಯಲ್ಲಿ 6 ಹಸುಗಳು ಸಜೀವ ದಹನ ಕೇಸ್ : ಬೆಂಕಿ ಇಟ್ಟ ಆರೋಪಿ ಅರೆಸ್ಟ್!


















